ರಿಮೋಟ್ ಕೊಳ್ಳುವ ನೆಪದಲ್ಲಿ ಮಹಿಳೆಯ ಸರ ಅಪಹರಿಸಿದ ಕಳ್ಳ

ಬೆಂಗಳೂರು, ಜ.29- ಅಂಗಡಿಯಲ್ಲಿ ಮಹಿಳೆಯೊಬ್ಬರೇ ಇರುವುದನ್ನು ಗಮನಿಸಿದ ಚೋರ ರಿಮೋಟ್ ಕೊಳ್ಳುವ ನೆಪದಲ್ಲಿ ಬಂದು 50 ಗ್ರಾಂ ಸರ ಎಗರಿಸಿರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತ್ರಿವೇಣಿ ರಸ್ತೆಯ ಮೂರನೇ ಕ್ರಾಸ್‍ನಲ್ಲಿ ರೀಚಾರ್ಜ್ ಹಾಗೂ ರಿಮೋಟ್ ಮತ್ತು ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ಇದ್ದು, ಅಂಗಡಿಯಲ್ಲಿ ನಿನ್ನೆ ದಿವ್ಯಾ ಹಾಗೂ ಅವರ ಪತಿ ಇದ್ದರು.

ಮಧ್ಯಾಹ್ನ 1.30ರ ಸುಮಾರಿಗೆ ದಿವ್ಯಾ ಅವರ ಪತಿ ಊಟಕ್ಕೆ ಮನೆಗೆ ತೆರಳಿದ್ದಾಗ ಅಂಗಡಿಯಲ್ಲಿ ದಿವ್ಯಾ ಒಬ್ಬರೇ ಇದ್ದರು. ಈ ಸಮಯವನ್ನೇ ಕಾದಿದ್ದ ಚೋರ ಅಂಗಡಿ ಬಳಿ ಬಂದು ನಿಮ್ಮ ಪತಿ ನನಗೆ ಪರಿಚಯ ಎಂದು ಮಾತನಾಡಿಸಿ ಡಿಟಿಎಚ್ ರಿಮೋಟ್ ಕೇಳಿದ್ದಾರೆ. ರಿಮೋಟ್ ಕೊಡಲು ದಿವ್ಯಾ ಅವರು ಹಿಂದೆ ತಿರುಗುತ್ತಿದ್ದಂತೆ ಅವರ ಕೊರಳಲ್ಲಿದ್ದ 50 ಗ್ರಾಂ ಸರ ಎಗರಿಸಿಕೊಂಡು ಪರಾರಿಯಾಗಿದ್ದಾನೆ.

ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ