ಇನ್ಷೂರೆನ್ಸ್ ಹಣಕ್ಕಾಗಿ ಹತ್ಯೆ ನಾಟಕ: ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಸಂಚು ಬಯಲು

ಭೋಪಾಲ್: ಮಧ್ಯಪ್ರದೇಶದಲ್ಲಿ ಸಂಭವಿಸಿದ್ದ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಬಹುದೊಡ್ಡ ಸಂಚೊಂದು ಬಯಲಾಗಿದ್ದು, ನಿಜವಾಗಿ ಹತ್ಯೆಯಾಗಿರುವುದು ಆರ್ ಎಸ್ ಎಸ್ ಕಾರ್ಯಕರ್ತನಲ್ಲ. ಬದಲಾಗಿ ಆತನ ತೋಟದ ಕೆಲಸದಾತ. ಅಲ್ಲದೇ ಇನ್ನೊಂದು ವಿಚಿತ್ರ ಸಂಗತಿಯೆಂದರೆ ಹತ್ಯೆಯಾಗಿದ್ದಾನೆ ಎನ್ನಲಾಗಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಹಿಮ್ಮತ್ ಪಾಟೀದಾರ್ ಎಂಬ ವ್ಯಕ್ತಿಯೇ ಈ ಹತ್ಯೆ ಹಿಂದಿನ ಸೂತ್ರದಾರ ಎಂಬ ಅಂಶ ಬಯಲಾಗಿದೆ.

ಮಧ್ಯ ಪ್ರದೇಶದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಹಿಮ್ಮತ್ ಪಾಟೀದಾರ್​ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸ್ ತನಿಖೆ ಬಳಿಕ ಕೊಲೆಯಾಗಿದ್ದಾನೆ ಎಂದು ತಿಳಿದಿದ್ದ ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯ 36 ವರ್ಷದ ಹಿಮ್ಮತ್ ಪಾಟಿದಾರ್ ಜೀವಂತವಾಗಿರುವ ವಿಷಯ ಬೆಳಕಿಗೆ ಬಂದಿದೆ. ವಾಸ್ತವವಾಗಿ ಕೊಲೆಯಾಗಿರುವ ವ್ಯಕ್ತಿಯೇ ಬೇರೆ. ಇನ್ಷೂರೆನ್ಸ್ ಹಣಕ್ಕಾಗಿ ಹಿಮ್ಮತ್ ಪಾಟೀದಾರ್ ಇಂತಹದ್ದೊಂದು ಸಂಚು ರೂಪಿಸಿದ್ದ.

ಹಿಮ್ಮತ್ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮದನ್ ಮಾಳವೀಯ(32 ವರ್ಷ) ಎಂಬಾತನನ್ನು ಹತ್ಯೆ ಮಾಡಿ, ಆ ಶವ ತನ್ನದೆಂದು ಹಿಮ್ಮತ್ ಪಾಟಿದಾರ್ ಬಿಂಬಿಸಿದ್ದನೆಂದು ಪೊಲೀಸರು ಹೇಳಿದ್ದಾರೆ. ತನಿಖೆ ವೇಳೆ ಶವದ ಡಿಎನ್​ಎ ಪರೀಕ್ಷೆ ನಡೆಸಿದ್ದ ಪೊಲೀಸರಿಗೆ ಈ ಮಾಹಿತಿ ದೊರೆತಿದ್ದು, ಪ್ರಸ್ತುತ ಪರಾರಿಯಾಗಿರುವ ಹಿಮ್ಮತ್ ಪಾಟೀದಾರ್ ನನ್ನು ಪೊಲೀಸರು ಹುಡುಕುತ್ತಿದ್ದಾರೆ.

ಜನವರಿ 23ರಂದು ರತ್ಲಮ್ ಜಿಲ್ಲೆಯ ಕಾಮೆದ್ ಎಂಬ ಗ್ರಾಮದ ಹೊಲದಲ್ಲಿ ಶವವೊಂದು ಪತ್ತೆಯಾಗಿತ್ತು. ಓರ್ವ ವ್ಯಕ್ತಿಯನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿತ್ತು.ಅಲ್ಲದೆ ಮುಖವನ್ನು ಗುರುತು ಸಿಗದಂತೆ ಸುಟ್ಟುಹಾಕಲಾಗಿತ್ತು. ಆದರೆ, ದೇಹದ ಆಕಾರ, ಬಟ್ಟೆ ಎಲ್ಲವೂ ಹಿಮ್ಮತ್ ಪಾಟೀದಾರ್ ಗೆ ಹೋಲಿಕೆಯಾಗುತ್ತಿತ್ತು. ಹಿಮ್ಮತ್ ಪಾಟೀದಾರ್ ಅವರ ತಂದೆಯು ತಮ್ಮ ಮಗ ಕೊಲೆಯಾಗಿದ್ಧಾನೆಂದು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪ್ರಕರನ ಆರೆಸ್ಸೆಸ್ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ ಎಂದು ಪ್ರಕರಣವು ರಾಜಕೀಯ ಬಣ್ಣ ಪಡೆದಿತ್ತು. ವಿಪಕ್ಷ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದರು.

ಆದರೆ, ಕೆಲವೇ ದಿನಗಳಲ್ಲಿ ಪೊಲೀಸರಿಗೆ ಈ ಪ್ರಕರಣದಲ್ಲಿನ ಸತ್ಯಾಂಶ ಬಯಲಾಗಿದೆ. ಶವದ ಸಮೀಪದಲ್ಲಿ ದೊರೆತಿದ್ದ ಡೈರಿಯೊಂದು ಹಲವು ಸುಳಿವನ್ನು ಬಿಟ್ಟುಕೊಟ್ಟಿತ್ತು. ಆ ಡೈರಿಯಲ್ಲಿ ಪಾಟೀದಾರ್ ನ ಇನ್ಷೂರೆನ್ಸ್ ಪಾಲಿಸಿ ನಂಬರ್, ಬ್ಯಾಂಕ್ ನ ಫಿಕ್ಸೆಡ್ ಡೆಪಾಸಿಟ್, ಪಿನ್ ನಂಬರ್ ಇತ್ಯಾದಿ ವಿವರಗಳಿದ್ದವು. ಶವದಲ್ಲಿದ್ದ ಮೊಬೈಲ್ ಫೋನ್ ನಲ್ಲಿ ದೂರವಾಣಿ ಕರೆಯ ವಿವರವನ್ನೆಲ್ಲಾ ಅಳಿಸಿಹಾಕಲಾಗಿತ್ತು. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿತ್ತು. ಇದರಿಂದ ಶವದ ಡಿಎನ್​ಎ ಪರೀಕ್ಷೆ ನಡೆಸಿದಾಗ ಶವದ ಡಿಎನ್​ಎಗೂ ಹಿಮ್ಮತ್ ಪಾಟೀದಾರ್​ನ ತಂದೆಯ ಡಿಎನ್​ಎಗೂ ಹೊಂದಿಕೆಯಾಗಿರಲಿಲ್ಲ. ಇದು ಪೊಲೀಸರ ತನಿಖೆ ಚುರುಕುಗೊಳ್ಳಲು ಕಾರಣವಾಗಿತ್ತು.

ಘಟನೆ ನಡೆಯುವ ಒಂದು ದಿನ ಮೊದಲಷ್ಟೇ ಪಾಟೀದಾರ್ ನ ತೋಟದಲ್ಲಿ ಕೆಲಸ ಮಾಡುವ ಕೂಲಿ ಮದನ್ ಮಾಳವೀಯ ಎಂಬಾತ ನಾಪತ್ತೆಯಾಗಿದ್ದ. ಮದನ್ ಶವದ ಡಿಎನ್ ಎ ಹಾಗೂ ಆತನ ಸಂಬಂಧಿಕರ ಡಿಎನ್​ಎ ಜೊತೆ ತಾಳೆ ಮಾಡಿದಾಗ ಎರಡೂ ಡಿಎನ್​ಎ ಹೊಂದಿಕೆಯಾಗುವುದರೊಂದಿಗೆ ಪೊಲೀಸರಿಗೆ ಸ್ಪಷ್ಟ ಸುಳಿವು ಸಿಕ್ಕಿತ್ತು. ನಂತರ, ಮದನ್​ ಹೆಂಡತಿ ಕೂಡ ಶವದ ಗುರುತು ಹಿಡಿದು ಅದು ತನ್ನ ಗಂಡನದೇ ಎಂದು ಪತ್ತೆ ಹಚ್ಚಿದ್ದಳು.

ಆರ್ಥಿಕ ಸಂಕಷ್ಟದಲ್ಲಿದ್ದ ಹಿಮ್ಮತ್ ಪಾಟೀದಾರ್, 20 ಲಕ್ಷ ಮೊತ್ತದ ಇನ್ಷೂರೆನ್ಸ್ ಪಡೆಯಲು ತನ್ನ ಸಾವಿನ ನಾಟಕ ಆಡಿದ್ದಾನೆಂಬುದು ಪೊಲೀಸರು ಶಂಕೆವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ತನ್ನ ತೋಟದಲ್ಲಿ ಕೆಲಸ ಮಾಡುವ ಮದನ್ ನನ್ನು ಹತ್ಯೆ ಮಾಡಿ, ಅದು ತನ್ನದೇ ಶವ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾನೆ ಎನ್ನಲಾಗಿದೆ.

ಇನ್ನು ಹಿಮ್ಮತ್ ಪಾಟೀದಾರ್ ಮತ್ತವನ ಕುಟುಂಬದವರು ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾರೆ. ಹಿಮ್ಮತ್ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದರಾದರೂ ಸಕ್ರಿಯ ಕಾರ್ಯಕರ್ತನಾಗಿರಲಿಲ್ಲ ಎನ್ನಲಾಗಿದೆ.

RSS Worker Found Murdered Last Week. DNA Test Shows He Could Be Killer

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ