ಬೆಂಗಳೂರು,ಜ.28-ರಾಜ್ಯ ರಾಜಕಾರಣದಲ್ಲಿ ಇದೀಗ ಟ್ವಿಟರ್ನಲ್ಲಿಯೇ ಭಾರೀ ವಾಕ್ಸಮರ ನಡೆಯುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಟ್ವಿಟರ್ನಲ್ಲಿ ಕಾಲೆಳೆದಿದ್ದರೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಟ್ವಿಟರ್ನಲ್ಲಿಯೇ ತಿರುಗೇಟು ಕೊಟ್ಟಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅಭಿನಯನದ ಸೀತಾರಾಮ ಕಲ್ಯಾಣ ಚಿತ್ರದ ಪ್ರೀಮಿಯರ್ ಶೋಗೆ ಮೀಸಲಿಟ್ಟ ಸಮಯವನ್ನು ರಾಜ್ಯದ ರೈತರ ಬಗ್ಗೆ ಗಮನ ಕೊಟ್ಟಿದ್ದರೆ 377 ಅನ್ನದಾತರ ಆತ್ಮಹತ್ಯೆಯನ್ನು ತಡೆಯಬಹುದಿತ್ತು ಎಂದು ಬಿಜೆಪಿ ಕಾಲೆಳೆದಿದೆ.
ರೈತರ ಆತ್ಮಹತ್ಯೆಗಳು ನಿರಂತರವಾಗಿ ಮುಂದುವರೆದಿದ್ದರೂ ಅದರ ಬಗ್ಗೆ ಕುಮಾರಸ್ವಾಮಿಎಳ್ಳಷ್ಟು ಗಮನಹರಿಸಿಲ್ಲ. ಆದರೆ ತಮ್ಮ ಮಗನ ಸಿನಿಮಾದ ಬಗ್ಗೆಯೇ ನೀವು ಗಮನಹರಿಸಿದ್ದೀರಿ. ಹಾಗಾದರೆ ನೀವೆಂತಹ ಮಣ್ಣಿನ ಮಗ ಎಂದು ಬಿಜೆಪಿ ಪ್ರಶ್ನಿಸಿದೆ.
ಹೆಗಡೆ-ಗುಂಡೂರಾವ್ ವಾಕ್ಸಮರ:
ಇನ್ನು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಡುವೆಯೂ ಟ್ವಿಟರ್ ಯುದ್ಧ ನಡೆದಿದೆ.ಹಿಂದೂ ಹೆಣ್ಣುಮಕ್ಕಳ ಮೇಲೆ ಕೈ ಮಾಡುವವರ ಕೈಗಳೇ ಇರಬಾರದೆಂದು ನಿನ್ನೆಯಷ್ಟೇ ಕಾರ್ಯಕ್ರಮವೊಂದರಲ್ಲಿ ಹೆಗಡೆ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೇಂದ್ರ ಸಚಿವರಾಗಿ ಈ ರೀತಿ ಕೋಮು ಸಂಘರ್ಷ ಉಂಟು ಮಾಡುವಂತಹ ಹೇಳಿಕೆ ನೀಡಬಾರದು. ನೀವೊಬ್ಬ ಜವಾಬ್ದಾರಿಯುತ ಕೇಂದ್ರ ಸಚಿವರು.ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಸಂಸದರಾಗಿ ಇಂತಹ ಹೇಳಿಕೆ ನೀಡುತ್ತಿರುವುದು ಶೋಚನೀಯಎಂದು ಪ್ರಶ್ನಿಸಿ ಟ್ವಿಟ್ ಮಾಡಿದ್ದರು.
ಗುಂಡೂರಾವ್ ಅವರ ಈ ಪ್ರತಿಕ್ರಿಯೆಗೆ ಟ್ವಿಟರ್ನಲ್ಲಿ ತಿರುಗೇಟು ಕೊಟ್ಟಿರುವ ಅನಂತಕುಮಾರ್ ಹೆಗಡೆ, ಈ ವ್ಯಕ್ತಿ ಕೇಳಿದ ಪ್ರಶ್ನೆಗೆ ನಾನು ಉತ್ತರಿಸುತ್ತಿದ್ದೇನೆ. ನಿಮ್ಮ ಸಾಧನೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಿ.ನೀವು ಓರ್ವ ಮುಸ್ಲಿಂ ಮಹಿಳೆಯ ಹಿಂದೆ ಓಡಿಹೋದ ವ್ಯಕ್ತಿ ಎಂಬುದಷ್ಟೇ ನನಗೆ ಗೊತ್ತು ಎಂದು ತಿರುಗೇಟು ಕೊಟ್ಟಿದ್ದರು.
ಇನ್ನು ಹೆಗಡೆ ಅವರ ಟ್ವಿಟರ್ಗೆ ಕಾಂಗ್ರೆಸ್ ನಾಯಕರು ಕೂಡ ಕಿಡಿಕಾರಿದ್ದಾರೆ.ಅನಂತಕುಮಾರ್ ಹೆಗಡೆ ಕೇಂದ್ರ ಸಚಿವರಾಗಲು ನಾಲಾಯಕ್, ಅವರು ಸಂಸದರಾಗಲೂ ಕೂಡ ಅರ್ಹರಿಲ್ಲ. ಬಿಜೆಪಿ ಇಂಥವರ ಮೇಲೆ ಕಡಿವಾಣ ಹಾಕದೆ ಪ್ರೋತ್ಸಾಹಿಸುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಧರ್ಮ ಮತ್ತು ಜಾತಿಗಳ ನಡುವೆ ಕೋಮು ಸಾಮರಸ್ಯ ಹಾಳು ಮಾಡಿ ಸಂವಿಧಾನವನ್ನು, ಅನ್ಯಕೋಮಿನವರನ್ನು, ದಲಿತರನ್ನು ಅವಮಾನಿಸುವ ಇವರಿಗೆ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.