ಬಲಿಷ್ಟ ಸರ್ಕಾರಕ್ಕಾಗಿ ಮೋದಿ ಸರ್ಕಾರವನ್ನು ಮತ್ತೆ ಚುನಾಯಿಸಬೆಕು: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್

ಬೆಂಗಳೂರು,ಜ.28-ಬಲಿಷ್ಠ ನಾಯಕತ್ವ ಮತ್ತು ಬಲಿಷ್ಠ ಸರ್ಕಾರಕ್ಕಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಮತದಾರರು ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಜನತೆಗೆ ಕರೆ ನೀಡಿದ್ದಾರೆ.

ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದೂ ಸಣ್ಣ ಭ್ರಷ್ಟಾಚಾರಕ್ಕೂ ಅವಕಾಶ ನೀಡದೆ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮೋದಿಯವರೇ ಪ್ರಧಾನಿಯಾಗಿ ಮುಂದುವರಿಯಬೇಕು.ಹಾಗಾಗಿ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟವನ್ನು ಬೆಂಬಲಿಸುವಂತೆ ಕರೆ ಕೊಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ನಮ್ಮ ಸುತ್ತಮುತ್ತ ವೈರಿಗಳೇ ತುಂಬಿ ತುಳುಕುತ್ತಿದ್ದಾರೆ.130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಂತಹ ಬೃಹತ್ ರಾಷ್ಟ್ರವನ್ನು ಮೋದಿಯಂತಹ ಸಮರ್ಥ ನಾಯಕರು ಮುನ್ನೆಡೆಸಬಲ್ಲರೇ ಹೊರತು ಬೇರೊಬ್ಬರಿಂದ ಅದು ಸಾಧ್ಯವಿಲ್ಲ. ನಮ್ಮ ಸರ್ಕಾರ ಸ್ಪಷ್ಟ ಜನಾದೇಶದೊಂದಿಗೆ ಎರಡನೇ ಬಾರಿಗೆ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಮಹಾಘಟ್ ಬಂಧನ್ ಕೇವಲ ಬಿಜೆಪಿ ಮತ್ತು ನರೇಂದ್ರ ಮೋದಿಯನ್ನು ಟೀಕಿಸುವುದರಲ್ಲೇ ಕಾಲಹರಣ ಮಾಡುತ್ತಿದೆ.24 ಪಕ್ಷಗಳು ಒಂದಾದ ತಕ್ಷಣ ದೇಶದ ಜನತೆ ಅವರನ್ನು ಒಪ್ಪುವುದಿಲ್ಲ. ಅಲ್ಲದೆ ಅವರಲ್ಲಿ ಮಹಾಘಟ್‍ಬಂಧನ್ ಮುನ್ನೆಡೆಸುವವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಪ್ರಧಾನಿ ಅಭ್ಯರ್ಥಿ ಯಾರು ಎಂಬುದಕ್ಕೆ ಸ್ಪಷ್ಟತೆ ಕಾಣುತ್ತಿಲ್ಲ. ಹೀಗಾಗಿ ಮಹಾಘಟ್‍ಬಂಧನ್ 2024ರ ನಂತರ ಆಡಳಿತ ನಡೆಸುವ ಬಗ್ಗೆ ಯೋಚಿಸಲಿ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಯಕತ್ವವನ್ನು ಮಹಾಘಟ್ ಬಂಧನ್‍ನಲ್ಲಿ ಇರುವವರೇ ಒಪ್ಪುವುದಿಲ್ಲ. ದೇಶಕ್ಕೆ ಸುಸ್ಥಿರ ಮತ್ತು ಸುಭದ್ರ ಆಡಳಿತ ನೀಡುವ ಮೋದಿ ಅವರಿಗೆ ಪರ್ಯಾಯ ನಾಯಕತ್ವ ಇಲ್ಲ ಎಂದು ಅಭಿಪ್ರಾಯಪಟ್ಟರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆಸುಗ್ರೀವಾಜ್ಞೆ ತರಲು ನಿಮ್ಮ ಬೆಂಬಲವಿದೆಯೇ ಎಂಬ ಪ್ರಶ್ನೆಗೆ, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಇದರ ಸ್ಪಷ್ಟನೆ ನೀಡಿದ್ದಾರೆ.ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ನಾವು ಸುಗ್ರೀವಾಜ್ಞೆ ಜಾರಿ ಮಾಡುವುದಿಲ್ಲ ಎಂದು ಹೇಳಿರುವಾಗ ಪುನಃ ನಾನು ಇದರ ಬಗ್ಗೆ ಪ್ರತಿಕ್ರಿಯೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಪಾಸ್ವಾನ್ ಸ್ಪಷ್ಟಪಡಿಸಿದರು.

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಅತ್ಯಂತ ಸೂಕ್ತವಾಗಿದೆ.ರಾಷ್ಟ್ರಪತಿಯಾಗಿ ಕೇಂದ್ರ ಸಚಿವರಾಗಿ ಅನೇಕ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.ಅವರೊಬ್ಬ ಅಪ್ರತಿಮ ಸಂಸದೀಯ ಪಟು.ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿರುವ ಬಗ್ಗೆ ಯಾವುದೇ ರೀತಿಯ ವಿವಾದ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಸಬ್ಸಿಡಿ ಬಿಡುಗಡೆ:
ಕೇಂದ್ರದಿಂದ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ 1100 ಕೋಟಿ ಸಬ್ಸಿಡಿ ಹಣ ಬಿಡುಗಡೆಯಾಗಬೇಕಿತ್ತು. ಈಗಾಗಲೇ ಇದರಲ್ಲಿ 300 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದೇವೆ. ಉಳಿದಿರುವ 800 ಕೋಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರಿಗಳ ಸಮನ್ವಯ ಕೊರತೆಯಿಂದ ವಿಳಂಬವಾಗಿದೆ.ಈಗಾಗಲೇ ಪ್ರಕ್ರಿಯೆ ಪೂರ್ಣ ಹಂತಕ್ಕೆ ತಲುಪಿರುವುದರಿಂದ ಶೀಘ್ರದಲ್ಲೇ ಸಬ್ಸಿಡಿ ಹಣ ರಾಜ್ಯಕ್ಕೆ ಸಿಗಲಿದೆ ಎಂದರು.

ದೇಶಾದ್ಯಂತ ಗ್ರಾಹಕರ ಹಿತರಕ್ಷಣೆ ಕಾಯ್ದೆಯನ್ನು ಜಾರಿ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ರಾಜ್ಯಸಭೆಯಲ್ಲಿ ಮಾತ್ರ ಅಂಗೀಕಾರವಾಗಬೇಕಿದೆ.ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ಕಾಯ್ದೆ ಅಂಗೀಕಾರವಾಗುವ ವಿಶ್ವಾಸ ತಮಗಿದೆ ಎಂದರು.

ನೂತನ ಕಾಯ್ದೆ ಪ್ರಕಾರ ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿ ಮಾಡುವ ಮುನ್ನ ತಮಗೆ ಅನುಮಾನ ಬಂದರೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಬಹುದಾಗಿದೆ. ಉತ್ಪಾದಕರು,ಮಾಧ್ಯಮದವರು ಪರಿಶೀಲಿಸದೆ ಪ್ರಚಾರ ನೀಡುವುದಾಗಲಿ, ಇಲ್ಲವೇ ಮಾರಟ ಮಾಡಬಾರದು. ಒಂದೆಡೆ ಪ್ರಚಾರ ನೀಡಿದರೆ ಮಾಧ್ಯಮ ಸೆಲೆಬ್ರಿಟಿಗಳು ಹಾಗೂ ಉತ್ಪಾದನೆ ಮಾಡುವ ಸಂಸ್ಥೆಗಳ ವಿರುದ್ದ ದೂರು ದಾಖಲಿಸಲು ಅವಕಾಶವಿರುತ್ತದೆ.ಮೊದಲು ಗ್ರಾಹಕರು ಜಿಲ್ಲಾ ಗ್ರಾಹಕರ ನ್ಯಾಯಲಯಗಳಲ್ಲಿ ದೂರು ನೀಡಬೇಕಿತ್ತು. ನೂತನ ಕಾಯ್ದೆ ಪ್ರಕಾರ ದೇಶದ ಯಾವುದೇ ಜಿಲ್ಲಾ ನ್ಯಾಯಾಲಯಗಳಲ್ಲಿ ದೂರು ಸಲ್ಲಿಸಬಹುದು ಎಂದು ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ