ಬೆಂಗಳೂರು,ಜ.28- ಶೇಕಡ 95.5ರಷ್ಟು ಜನಸಂಖ್ಯೆ ಹೊಂದಿರುವ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಇತರೆ ವರ್ಗಗಳಿಗೆ ಶೇ.50ರಷ್ಟು ಮೀಸಲಾತಿ ಸೌಲಭ್ಯವಿದೆ. ಆದರೆ ಕೇವಲ 4.5ರಷ್ಟು ಜನಸಂಖ್ಯೆ ಹೊಂದಿರುವ ಮೇಲ್ವರ್ಗದವರಿಗೆ ಕೇಂದ್ರ ಸರ್ಕಾರ ಶೇ.10ರಷ್ಟು ಮೀಸಲಾತಿ ಸೌಲಭ್ಯ ನೀಡಿದೆ ಎಂದು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ದೇವರಾಜು ಅರಸು ಭವನದಲ್ಲಿ ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆ 2019 ಮತ್ತು ಅದರ ಪರಿಣಾಮಗಳು ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, 1874ರಲ್ಲಿ ಮೈಸೂರು ಅರಸರು ವಿಶ್ವದಲ್ಲೇ ಮೊದಲ ಬಾರಿಗೆ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದರು. ಆ ಸಂದರ್ಭದಲ್ಲಿ ಆಡಳಿತಾತ್ಮಕ ಕಚೇರಿಗಳು ಮತ್ತು ಹುದ್ದೆಗಳಲ್ಲಿ ಮೇಲ್ವರ್ಗದ ಪ್ರಾಬಲ್ಯ ಶೇ.90ಕ್ಕಿಂತಲೂ ಹೆಚ್ಚಿತ್ತು.ಹೀಗಾಗಿ ಬ್ರಾಹ್ಮಣರ ಪ್ರಾಬಲ್ಯವನ್ನು ಶೇ.50ಕ್ಕೆ ಮಿತಿಗೊಳಿಸಬೇಕು ಎಂಬ ಉದ್ದೇಶದಿಂದ ಶೇ.70ರಷ್ಟು ಮೀಸಲಾತಿ ಸೌಲಭ್ಯವನ್ನು ಜಾರಿಗೆ ತಂದು ಏಳು ವರ್ಷಗಳ ಗುರಿ ನಿಗದಿಪಡಿಸಲಾಗಿತ್ತು.
ಕಾಲಾ ನಂತರದಲ್ಲಿ ಮೀಸಲಾತಿ ಪ್ರಮಾಣ ನ್ಯಾಯಾಲಯದ ಸೂಚನೆಯಂತೆ ಶೇ.50ಕ್ಕೆ ಮಿತಿಗೊಂಡಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಒಕ್ಕಲಿಗ, ಲಿಂಗಾಯಿತ ಸೇರಿದಂತೆ ಹಲವಾರು ಜಾತಿಗಳು ಮೀಸಲಾತಿ ಸೌಲಭ್ಯಕ್ಕೊಳಪಟ್ಟಿವೆ. ಮೀಸಲಾತಿ ಸೌಲಭ್ಯದಿಂದ ಹೊರಗಿರುವುದು ಬ್ರಾಹ್ಮಣರು, ವೈಶ್ಯರು ಮತ್ತು ಜೈನ ಧರ್ಮದವರಲ್ಲಿ ಶ್ವೇತಾಂಬರರು ಮಾತ್ರ.
ಈ ಮೂರು ಸಮುದಾಯಗಳ ಜನಸಂಖ್ಯೆ ಶೇ.4.5ರಷ್ಟು ಮಾತ್ರ.ಇತ್ತೀಚೆಗೆ ಕೇಂದ್ರ ಜಾರಿಗೆ ತಂದಿರುವ ಮೇಲ್ವರ್ಗದ ಶೇ.10ರಷ್ಟು ಮೀಸಲಾತಿ ಸೌಲಭ್ಯ ಈ ನಾಲ್ಕು ವರ್ಗಗಳಿಗೆ ಅನ್ವಯವಾಗುತ್ತದೆ.ಇದನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಜಾತಿಗಳು ಸೇರಿದಂತೆ ದೇಶದ ಜನಸಂಖ್ಯೆ. ಶೇ.95.5ರಷ್ಟಿದೆ. ಆದರೆ ಅಷ್ಟೂ ಮಂದಿಗೆ ನೀಡುತ್ತಿರುವ ಮೀಸಲಾತಿ ಶೇ.50ರಷ್ಟು ಮಾತ್ರ.ಶೇ.4.5ರಷ್ಟಿರುವ ಜನರಿಗೆ ಜನಸಂಖ್ಯೆಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ಮೀಸಲಾತಿ ಒದಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಮೀಸಲಾತಿಯ ಬಿಲ್ ಲೋಕಸಭೆಯಲ್ಲಿ ಮಂಡನೆಯಾದಾಗ ಬಿಹಾರದ ಆರ್‍ಜೆಡಿ, ತಮಿಳುನಾಡಿನ ಡಿಎಂಕೆ ಸೇರಿ ಒಂದೆರಡು ಪಕ್ಷಗಳು ಮಾತ್ರ ವಿರೋಧ ವ್ಯಕ್ತಪಡಿಸಿವೆ.ಉಳಿದಂತೆ ಎಲ್ಲಾ ಪಕ್ಷಗಳು ಶೇ.10ರಷ್ಟು ಮೀಸಲಾತಿ ಪರವಾಗಿ ಮತ ಹಾಕಿವೆ.
ತಮ್ಮ ಸಮುದಾಯಕ್ಕೆ ವಿರುದ್ಧವಾಗಿರುವ ಮೀಸಲಾತಿ ಮಸೂದೆಯನ್ನು ಸಂಸದರು ಮತ್ತು ರಾಜ್ಯಸಭಾ ಸದಸ್ಯರು ವಿರೋಧಿಸಿದರೆ ಮತ ಹಾಕುವಂತಹ ವ್ಯವಸ್ಥೆ ನಿರ್ಮಾಣವಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಿಂದ ರಾಮ ಮನೋಹರ್ ಲೋಹಿಯಾ ಅವರು ಎಲ್ಲಾ ಪಕ್ಷಗಳು ಒಂದು ಜಾತಿಯ ಹಿಡಿತದಲ್ಲಿವೆ ಎಂದು ಬಹಳ ಹಿಂದೆಯೇ ಹೇಳಿದ್ದರು.ಅದೇ ರೀತಿ ಪಕ್ಷಗಳು ತಮಗೆ ಬೇಕಾದಂತೆ ಕಾನೂನುನ್ನು ರಚಿಸಿಕೊಳ್ಳುತ್ತವೆ ಎಂಬ ಅವರ ಹೇಳಿಕೆ ನಿಜವಾಗಿದೆ.
ಶೇ.10ರಷ್ಟು ಮೀಸಲಾತಿ ಕಾಯ್ದೆಯಲ್ಲಿ ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಮತ ಹಾಕಲು ಸಾಧ್ಯವಾಗದೆ ಎಲ್ಲರೂ ಒಪ್ಪಿಗೆ ನೀಡಿರುವುದು ಪಕ್ಷಾಂತರ ನಿಷೇಧ ಕಾಯ್ದೆಗೆ ಹೆದರಿ. ಈಗ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕಾದ ಅಗತ್ಯತೆ ಕಾಣುತ್ತಿದೆ ಎಂದು ಅವರು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಮಾತನಾಡಿ, ವಾರ್ಷಿಕ ಎಂಟು ಲಕ್ಷ ಆದಾಯ ಇರುವ ವ್ಯಕ್ತಿ ದಿನಕ್ಕೆ ಆತನ ಗಳಿಕೆ 2200 ರೂ.ಗಳಷ್ಟಿರುತ್ತವೆ. ಅಂತಹ ವ್ಯಕ್ತಿ ಆರ್ಥಿಕವಾಗಿ ಹಿಂದುಳಿದವನು ಎಂದು ಭಾವಿಸಿ ಮೀಸಲಾತಿ ನೀಡುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಯಾವುದೇ ಅಂಕಿಅಂಶಗಳನ್ನು ಇಟ್ಟುಕೊಳ್ಳದೆ ಏಕಾಏಕಿ ಮೀಸಲಾತಿ ಮಸೂದೆ ಜಾರಿಗೆ ತಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆರ್ಥಿಕವಾಗಿ ಹಿಂದುಳಿದ ಕಾರಣಕ್ಕಾಗಿಯಾವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವುದಿಲ್ಲ. ಮೀಸಲಾತಿ ಎಂಬುದು ಸಾಮಾಜಿಕ ಸ್ಥಿತಿಗತಿ ಆಧರಿಸಿ ನೀಡುವುದೇ ಹೊರತು ಆರ್ಥಿಕತೆ ಆಧಾರಿತವಾಗಿ ಅಲ್ಲ ಎಂದು ಅಭಿಪ್ರಾಯಪಟ್ಟರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್, ರಾಜಸಭಾ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮುಂತಾದವರು ವೇದಿಕೆಯಲ್ಲಿದ್ದರು.
ಚೆನ್ನೈನ ದ್ರಾವಿಡ ಕಂಗಳಮ್‍ದ ಅಧ್ಯಕ್ಷ ಡಾ.ಕೆ.ವೀರಮಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.