ಸರ್ಕಾರಿ ಆಸ್ಪತ್ರೆಗಳಲ್ಲಿ ವಿಪರೀತವಾದ ಔಷಧಿಗಳ ಅಭಾವ

ಬೆಂಗಳೂರು, ಜ.28-ಬಡ ರೋಗಿಗಳಿಗೆ ಹೈಟೆಕ್ ಆಸ್ಪತ್ರೆ ಮಾದರಿಯಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಸಿಗಬೇಕೆಂಬ ಆಶಯ ವ್ಯಕ್ತವಾಗುತ್ತಿರುವ ನಡುವೆಯೇ ಬಡವರು ಚಿಕಿತ್ಸೆ ಪಡೆಯಲು ಬರುವ ಸರ್ಕಾರಿ ಆಸ್ಪತ್ರೆಗಳಲ್ಲೇ ಔಷಧಿಗಳ ಅಭಾವ ವಿಪರೀತವಾಗಿದ್ದು, ಆತಂಕ ಸೃಷ್ಟಿಸಿದೆ.

ಇತ್ತೀಚಿನ ದಿನಗಳಲ್ಲಿ ಬಡವಬಲ್ಲಿದನೆನ್ನದೆ ಕಾಣಿಸಿಕೊಳ್ಳುವ ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ ಸಂಬಂಧಿ ರೋಗಗಳು, ಥೈರಾಯ್ಡ್‍ನಂತಹ ಗಂಭೀರ ಕಾಯಿಲೆಗಳ ನಿವಾರಣೆಗೆ ಅಗತ್ಯವಿರುವ ಔಷಧಗಳು ಸೇರಿದಂತೆ ವಿವಿಧ ಚಿಕಿತ್ಸೆಗೆ ಬೇಕಿರುವ ಗ್ಲೂಕೋಸ್ ಬ್ಯಾಂಡೇಜ್ ಹಲವಾರು ವಿಧದ ಮಾತ್ರೆಗಳು, ಔಷಧಗಳ ದಾಸ್ತಾನು ಕರಗುತ್ತಿದೆ.ಆದರೆ ಇದನ್ನು ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡಿ ಈ ಆಸ್ಪತ್ರೆಗಳಿಗೆ ಬರುವವರಿಗೆ ಔಷಧದ ವ್ಯವಸ್ಥೆ ಮಾಡಬೇಕಿರುವ ಕೆಡಿಎಲ್‍ಡಬ್ಲ್ಯುಎಸ್ ಇದನ್ನು ಸೂಕ್ತವಾಗಿ ನಿರ್ವಹಿಸುತ್ತಿಲ್ಲ.

ಔಷಧಿಗಳ ಅಭಾವಕ್ಕೆ ಅಧಿಕಾರಿಗಳ ಕಮೀಷನ್ ಆಸೆ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ನೆರೆ ರಾಜ್ಯಗಳಲ್ಲಿ ಮೂರು ಹಂತಗಳಲ್ಲಿ ಪ್ರತಿ ವರ್ಷ ಔಷಧ ಪೂರೈಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ಆದರೆ ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲ.

ಪ್ರತಿ ಟೆಂಡರ್ ಕರೆದ ನಂತರವೂ ಪ್ರಕ್ರಿಯೆ ಪೂರ್ಣಗೊಳಿಸಲು ಮೂರ್ನಾಲ್ಕು ತಿಂಗಳ ಅವಧಿ ಬೇಕಾಗುತ್ತದೆ. ಹೀಗಿದ್ದೂ ಸಹ ಆರೋಗ್ಯ ಇಲಾಖೆಯ ಅವಿಭಾಜ್ಯ ಅಂಗವಾಗಿರುವ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿ (ಕೆಡಿಎಲ್‍ಡಬ್ಲ್ಯುಎಸ್) ಮುಂಗಡವಾಗಿ ಔಷಧ ಸಂಗ್ರಹಣೆಯಲ್ಲೂ ಆಸಕ್ತಿ ವಹಿಸಿಲ್ಲ.

ರಾಜ್ಯದಲ್ಲಿ ಜಿಲ್ಲಾ, ತಾಲೂಕು ಹಾಗೂ ಸಮುದಾಯ ಸಹಿತ 27 ಸಾವಿರ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಒದಗಿಸಲು ಅಂದಾಜು 300 ಕೋಟಿ ರೂ. ಟೆಂಡರ್ ವಹಿವಾಟು ನಡೆಸಲಾಗುತ್ತದೆ. ಆದರೆ ಈ ಬಾರಿ ಮುನ್ನೆಚ್ಚರಿಕೆ ವಹಿಸದೆ ಇರುವುದರಿಂದ 300 ಔಷಧಿಗಳ ಪೈಕಿ 200 ಔಷಧಿಗಳು ಈಗಾಗಲೇ ಖಾಲಿಯಾಗಿವೆ. ಇನ್ನು ಸಂಗ್ರಹವಿರುವ ಔಷಧಿಗಳು ಇನ್ನೊಂದು ತಿಂಗಳಿಗೆ ಮಾತ್ರ ಸಾಕಾಗಲಿದೆ.

ಕಮೀಷನ್ ಆಸೆಗಾಗಿ ಔಷಧಿ ಪೂರೈಕೆ ಮಾಡುವವರಿಗೆ 40 ದಿನಗಳಲ್ಲೇ ಪಾವತಿ ಮಾಡಬೇಕಾದ ಹಣವನ್ನು ಗುತ್ತಿಗೆದಾರರಿಗೆ ಅಧಿಕಾರಿಗಳು ನೀಡುತ್ತಿಲ್ಲ ಎನ್ನಲಾಗಿದ್ದು, ಇದರಿಂದ ಸಾಕಷ್ಟು ಬಿಲ್ ಬಾಕಿ ಉಳಿದಿವೆ.

ಹಾಗಾಗಿಯೇ ಟೆಂಡರ್‍ನಲ್ಲಿ ಪಾಲ್ಗೊಳ್ಳಲು ಸಹ ಔಷಧ ಪೂರೈಕೆ ಗುತ್ತಿಗೆದಾರರು ಹಿಂದೇಟು ಹಾಕಿದ್ದಾರೆ. ಈ ಎಲ್ಲಾ ಅವಾಂತರಗಳಿಂದ ಸರ್ಕಾರಿ ಆಸ್ಪತ್ರೆಗಳಿಗೆ ಎಡತಾಕುವ ಬಡರೋಗಿಗಳು ಇಲ್ಲೂ ಕಡಿಮೆ ದರದಲ್ಲಿ ಔಷಧ ದೊರೆಯದೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ವ್ಯಯಿಸಬೇಕಾದ ಹಾಗೂ ಔಷಧಿಯನ್ನು ಹೊರಗೆ ಖರೀದಿಸ ಬೇಕಾದ ಪರಿಸ್ಥಿತಿಗೆ ಸಿಲುಕಿ ನಲುಗುವಂತಾಗಿದೆ.

ಗಂಭೀರ ಕಾಯಿಲೆಗಳೆನಿಸಿರುವ ನಿರ್ಜಲೀಕರಣ, ಶ್ವಾಸಕೋಶ ಸಮಸ್ಯೆ, ರೇಬಿಸ್, ಅಸ್ತಮಾ, ಚಿಕನ್ ಫಾಕ್ಸ್, ಚರ್ಮರೋಗ, ಅನಸ್ತೇಶಿಯಾ, ಅಲರ್ಜಿ, ಕ್ಯಾನ್ಸರ್, ಮೂರ್ಛೆ, ಖಿನ್ನತೆ, ನಿದ್ರಾಹೀನತೆ, ನ್ಯೂಮೋನಿಯಾ, ಸಂಧಿವಾತ, ರಕ್ತಹೀನತೆಯಂತಹ ಕಾಯಿಲೆಗಳಿಗೆ ನೀಡುವ ಔಷಧಿಗಳು ಸಂಗ್ರಹಾಗಾರದಲ್ಲಿ ಸಂಪೂರ್ಣ ಖರ್ಚಾಗಿ ಹೋಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ