ರಾಜಧಾನಿಯಲ್ಲಿ ಉಲ್ಬಣಗೊಂಡ ಕಸದ ಸಮಸ್ಯೆ

ಬೆಂಗಳೂರು, ಜ.25-ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ಮೂರು ದಿನಗಳಿಂದ ತ್ಯಾಜ್ಯ ವಿಲೇವಾರಿಯಾಗದೆ ಗಲ್ಲಿ ಗಲ್ಲಿಗಳು ಗಬ್ಬು ನಾರುತ್ತಿವೆ. ಕಸ ಸಾಗಾಣಿಕೆ ಲಾರಿಗಳು ನಿಂತಲ್ಲೇ ನಿಂತಿವೆ.

ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ ಎಂಬಂತೆ ಬಿಬಿಎಂಪಿ, ಕಸದ ಸಮಸ್ಯೆ ತೀವ್ರಗೊಂಡಾಗ ಅಧಿಕಾರಿಗಳೊಂದಿಗೆ ಚರ್ಚೆಗೆ ಮುಂದಾಗಿದೆ.

ಮೇಯರ್ ಗಂಗಾಂಬಿಕೆ ಅವರು ಬಿಬಿಎಂಪಿ ಆಯುಕ್ತ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಸದ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ ಬೆಳ್ಳಳ್ಳಿ ಕ್ವಾರಿಗೆ ದೌಡಾಯಿಸಿ ಅಧಿಕಾರಿಗಳೊಂದಿಗೆ ಚರ್ಚೆಗೆ ಮುಂದಾಗಿದ್ದಾರೆ.

ಸಂಜೆಯೊಳಗೆ ಸಮಸ್ಯೆ ನಿವಾರಣೆ: ನಗರದಲ್ಲಿ ಕಸದ ಸಮಸ್ಯೆ ಆಗಿರುವುದು ನಿಜ. ಸಂಜೆಯೊಳಗೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಮೇಯರ್ ನೀಡಿದ್ದಾರೆ.

ನಗರದಲ್ಲಿ ಕಳೆದ ಮೂರು ದಿನಗಳಿಂದ ಕಸ ವಿಲೇವಾರಿಯಾಗಿಲ್ಲ. ಬೆಳ್ಳಳ್ಳಿ ಕ್ವಾರಿಯಲ್ಲಿ ಕಸ ಹಾಕಲು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಕಸ ಸಾಗಾಣಿಕೆಯ ಲಾರಿಗಳು ನಿಂತಿದ್ದರೂ ಪಾಲಿಕೆ ಅಧಿಕಾರಿಗಳು ಈ ವಿಚಾರವನ್ನು ಮುಚ್ಚಿಟ್ಟಿದ್ದರಿಂದ ಕಸದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.

ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಗಾಂಧಿನಗರ ಸೇರಿದಂತೆ ಇನ್ನೂ ಹಲವೆಡೆ ಮನೆಗಳಿಂದ ತಂದ ಕಸ ರಸ್ತೆಗಳ ಮಧ್ಯೆಯೇ ಇದೆ.ಗಲ್ಲಿ ಗಲ್ಲಿಗಳು ಗಬ್ಬು ನಾರಲು ಶುರುವಾಗಿದೆ.ಕಸದ ಕಂಟಕ ಮತ್ತೆ ಬಿಬಿಎಂಪಿಯನ್ನು ಕಾಡತೊಡಗಿದೆ.

ಬೆಳ್ಳಳ್ಳಿ ಕ್ವಾರಿ ಮತ್ತೆ ಬೇರೆಡೆಗೆ ಕಸ ಕಳುಹಿಸಲು ಬಿಬಿಎಂಪಿ ಬಳಿ ಬೇರೆ ಯೋಜನೆಗಳಿಲ್ಲ. ಹಾಗಾಗಿ 198 ವಾರ್ಡ್‍ಗಳಲ್ಲೂ ರಸ್ತೆ ಬದಿಯಲ್ಲಿ ಲಾರಿಗಳು ನಿಂತಿವೆ. ಎರಡು ಕಾಂಪ್ಯಾಕ್ಟ್ ವಾಹನಗಳು ನಿಂತಿವೆ. ಕಸದ ವಾಸನೆಯಿಂದ ಸುತ್ತಮುತ್ತಲ ಜನರಿಗೆ ಕಿರಿಕಿರಿ ಉಂಟಾಗಿದೆ.ಸಮಸ್ಯೆ ಉಂಟಾಗುವುದಕ್ಕಿಂತ ಮುಂಚೆ ಪಾಲಿಕೆ ಎಚ್ಚೆತ್ತುಕೊಳ್ಳಬೇಕಿತ್ತು.ಆದರೆ, ಈಗ ಬೆಳ್ಳಳ್ಳಿ ಕ್ವಾರಿಯಲ್ಲಿ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ.ಘನತ್ಯಾಜ್ಯ ವಿಲೇವಾರಿ ಜಂಟಿ ಆಯುಕ್ತ ಸರ್ಫರಾಜ್ ನೇತೃತ್ವದಲ್ಲಿ ಸಭೆ ನಡೆದಿದೆ.

ತಕ್ಷಣವೇ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಸದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡು ನಗರದ ಮಾನ ಮತ್ತೊಮ್ಮೆ ಹರಾಜಾಗುವುದರಲ್ಲಿ ಅನುಮಾನವಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ