ರೈತರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವಂತೆ ರೈತ ಸಂಗದ ಒತ್ತಾಯ

ಬೆಂಗಳೂರು, ಜ.25-ಇದುವರೆಗೂ ರೈತರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಹಿರಿಯ ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ ಮಾತನಾಡಿ, ಮುಖ್ಯಮಂತ್ರಿಗಳು ಹೇಳಿರುವಂತೆ ರೈತರು ಮಾಡಿರುವ ಎಲ್ಲಾ ಬೆಳೆ ಸಾಲವನ್ನು ಮನ್ನಾ ಮಾಡಬೇಕು, ರೈತ ಸಮುದಾಯ ಕೃಷಿ ಮುಂದುವರೆಸಲು ಅನುಕೂಲವಾಗುವಂತೆ ಬಡ್ಡಿ ರಹಿತವಾಗಿ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು. ಕೃಷಿ ಕಾರ್ಮಿಕರು ಹಾಗೂ ಇಳುವರಿ ಹೊಂದಿರುವ ರೈತರ ಜೀವನೋಪಾಯಕ್ಕಾಗಿ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು, ಗ್ರಾಮೀಣ ವಾಸಿಗಳ ಆರ್ಥಿಕ ಚಟುವಟಿಕೆಯನ್ನು ವೃದ್ಧಿಸಲು ಕುರಿ, ಕೋಳಿ, ಹಸು, ಎಮ್ಮೆ, ಮೀನುಗಾರಿಕೆ, ಜೇನು ಸಾಕಾಣಿಕೆಗೆ ಒತ್ತು ನೀಡುವುದು ಸೇರಿದಂತೆ ಒಟ್ಟು 23 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಇದುವರೆಗೂ ರೈತರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸದೆ ಇರುವುದರಿಂದ ಇಂದು ಮುಖ್ಯಮಂತ್ರಿಗಳು ಕರೆದಿರುವ ರೈತರ ಸಭೆಯಿಂದ ದೂರ ಉಳಿದಿರುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಹಿರಿಯ ಉಪಾಧ್ಯಕ್ಷ ರಾಮ ಚನ್ನಪಟ್ಟಣ, ವಿಭಾಗೀಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಗೋಪಾಲ್ ಸೇರಿದಂತೆ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ