ಬೆಂಗಳೂರು,ಜ.25-ಪ್ರತಿಯೊಬ್ಬ ಶಾಸಕರು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ, ಅವರ ಜೊತೆ ಯಾರು ಇರುತ್ತಾರೆ, ಕ್ಷೇತ್ರದಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂಬುದು ಸೇರಿದಂತೆ ಅವರ ದಿನನಿತ್ಯದ ದಿನಚರಿಗಳನ್ನು ಪ್ರತಿ ಗಂಟೆಗೊಮ್ಮೆ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕೆಂದು ಗುಪ್ತಚರ ವಿಭಾಗದ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ರವಾನೆಯಾಗಿದೆ.
ಕೆಲವು ಅತೃಪ್ತ ಶಾಸಕರನ್ನು ಸೆಳೆದು ಫೆ.8ರೊಳಗೆ ಸರ್ಕಾರ ರಚನೆ ಮಾಡುವ ತವಕ ಬಿಜೆಪಿಯದ್ದು. ಆದರೆ ಇದಕ್ಕೆ ಅವಕಾಶ ನೀಡದೆ ಶತಾಯಗತಾಯ ಸರ್ಕಾರವನ್ನು ಉಳಿಸಿಕೊಂಡು ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿ ತಂತ್ರ ರೂಪಿಸಲು ಕಾಂಗ್ರೆಸ್ ಕೂಡ ಸಜ್ಜಾಗಿದೆ.
ಶಾಸಕರ ಮೇಲೆ ಈ ರೀತಿ ನಿಗಾ ಇಡುವುದು ಹೊಸದೇನಲ್ಲ. ಪ್ರತಿ ಸರ್ಕಾರದಲ್ಲೂ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳು ನಿರ್ದೇಶನ ನೀಡುವುದು ಸಾಮಾನ್ಯ ಸಂಗತಿ.
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ವಿಫಲ ಯತ್ನ ನಡೆಸುತ್ತಿರುವ ಬಿಜೆಪಿ, ಕಾಂಗ್ರೆಸ್ ನ ಅತೃಪ್ತ ಶಾಸಕರಿಗೆ ಭಾರೀ ಪ್ರಮಾಣದ ಹಣದ ಅಮಿಷವೊಡ್ಡಿ ಸೆಳೆಯಲು ಯತ್ನಿಸುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಹಲವಾರು ಬಾರಿ ಆಪರೇಷನ್ ಕಮಲ ನಡೆಸಿ ಕೈ ಸುಟ್ಡುಕೊಂಡಿದೆ.
ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ಅಧ್ಯಕ್ಷ ರ ನೇಮಕಾತಿಯಾದ ನಂತರ ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರು ಪಕ್ಷದ ವಿರುದ್ಧವೇ ತೊಡೆತಟ್ಟಿದರು.
ಅದರಲ್ಲೂ ಬೆಳಗಾವಿಯ ಸಾಹುಕಾರ ರಮೇಶ್ ಜಾರಕಿಹೊಳಿಯಂತೂ ತಮ್ಮನ್ನು ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಪ್ರತೀಕಾರವಾಗಿ ಸರ್ಕಾರವನ್ನೇ ಕೆಡವಲು ಭಿನ್ನಮತ ಸಾರಿದರು.
ಈಗಾಗಲೇ ಈ ಅತೃಪ್ತ ಶಾಸಕರು ಮುಂಬೈ ಸೇರಿ ಹಲವು ದಿನಗಳಾಗಿದ್ದರೂ ಅವರ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರಲ್ಲೇ ಗೊಂದಲ ಮೂಡಿದೆ.
ಕೆಲವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಸದ್ಯಕ್ಕೆ ದೋಸ್ತಿ ಸರ್ಕಾರ ಬೀಸೋ ದೊಣ್ಣೆಯಿಂದ ಪಾರಾಗಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಶಾಸಕರನ್ನು ರೆಸಾರ್ಟ್ನಲ್ಲಿ ಮೂರು ದಿನ ಕೂಡಿ ಹಾಕಿ ಒಗ್ಗಟ್ಟಿನ ಮಂತ್ರವನ್ನು ಕಾಂಗ್ರೆಸ್ ನಾಯಕರು ಬೋಧಿಸಿದ್ದರೂ ಅತೃಪ್ತ ಶಾಸಕರ ಮೇಲಿನ ಅಪನಂಬಿಕೆ ಮಾತ್ರ ದೂರ ಆಗಿಲ್ಲ.
ಏನೇ ಆದರೂ ಬಜೆಟ್ ಮಂಡನೆಗೂ ಮುನ್ನವೇ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿರುವ ಬಿಜೆಪಿ ಸದ್ದಿಲ್ಲದೆ ಭಿನ್ನಮತೀಯ ಶಾಸಕರಿಗೆ ಗಾಳ ಹಾಕಲು ಮುಂದಾಗಿದೆ.
ಇದರ ಸುಳಿವು ಅರಿತಿರುವ ಕಾಂಗ್ರೆಸ್ ಪ್ರತಿಯೊಬ್ಬ ಶಾಸಕನ ದಿನಚರಿ ಮೇಲೆ ರಹಸ್ಯ ಕಣ್ಣಿಟ್ಟಿದೆ.
ಪಕ್ಷದಲ್ಲಿದ್ದರೂ ಖಾಯಂ ಭಿನ್ನಮತೀಯ ಶಾಸಕರೆಂದೇ ಗುರುತಿಸಿಕೊಂಡಿರುವ ಕೆಲವರ ಚಲನವಲನ ಗಳ ಮೇಲೆ ತೀವ್ರ ನಿಗಾ ಇಡಲು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ದೋಸ್ತಿ ಪಕ್ಷದ ಮುಖಂಡರಿಗೆ ಸಲಹೆ ನೀಡಿದ್ದಾರೆ.
ಈ ಹಿಂದೆಯೂ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಬಿಜೆಪಿ ಸೆಳೆಯಲು ಮುಂದಾದಾಗ ಸರ್ಕಾರಕ್ಕೆ ಇಂಚಿಂಚೂ ಮಾಹಿತಿ ನೀಡಿದ್ದು ಇದೇ ಗುಪ್ತಚರ ವಿಭಾಗದ ಅಧಿಕಾರಿಗಳು.
ಹಾಗೇ ನೋಡಿದರೆ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ನಂತರ ಗುಪ್ತಚರ ವಿಭಾಗಕ್ಕೆ ಒಂದಿಷ್ಟು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದರಿಂದಲೇ ಬಿಜೆಪಿಯ ಆಟಾಟೋಪಗಳಿಗೆ ಕಡಿವಾಣ ಬಿದ್ದಿತ್ತು. ತನ್ನ ಸರ್ಕಾರವನ್ನು ಕೆಡವಲು ಮಾಫಿಯಾ ಅವರು ಮೀಟರ್ ಬಡ್ಡಿ, ಹವಾಲ ದಂಧೆ ನಡೆಸುವವರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಅವರು ಸಿಡಿಸಿದ ಬಾಂಬ್ಗೆ ಕಮಲ ನಾಯಕರ ಆಪರೇಷನ್ ಠುಸ್ಸಾಗಿತ್ತು.
ಇದರ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕಿದ್ದು ಗುಪ್ತಚರ ವಿಭಾಗದ ಅಧಿಕಾರಿಗಳು. ಯಾವುದೇ ಮುಖ್ಯಮಂತ್ರಿ ಯಶಸ್ವಿ ಆಡಳಿತ ನಡೆಸಬೇಕೆಂದರೆ ಮೊದಲು ಗುಪ್ತಚರ ವಿಭಾಗವನ್ನು ಬಲಪಡಿಸುತ್ತಾರೆ.
ಮಾಜಿ ಪ್ರಧಾನಿ ದೇವೇಗೌಡರ ಸೂಚನೆಯಂತೆ ಕುಮಾರಸ್ವಾಮಿ ಗುಪ್ತಚರ ವಿಭಾಗಕ್ಕೆ ಬಲಿಷ್ಠ ಅಧಿಕಾರಿಗಳನ್ನು ಕೂರಿಸಿದ್ದರಿಂದಲೇ ಯಾವ ಯಾವ ಪಕ್ಷದಲ್ಲಿ ಏನೇನು ನಡೆಯುತ್ತದೆ ಎಂಬ ಮಾಹಿತಿ ಕ್ಷಣಾರ್ಧದಲ್ಲಿ ಸರ್ಕಾರದ ಕೈ ಸೇರುತ್ತದೆ.
ಫೆ.8ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಅದಕ್ಕೂ ಮೊದಲೇ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸಿದೆ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಸಂಭವಿಸಬಹುದೆಂಬ ಹಿನ್ನೆಲೆಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ಗೆ ಎದುರಾಗಿದೆ.
ಇಂದಿನ ಸಮ್ಮಿಶ್ರ ಸರ್ಕಾರಕ್ಕೆ ಸದಾ ಅಸ್ಥಿರತೆಯ ಭೀತಿ ಎದುರಾಗಿರುವುದು, ಶಾಸಕರ ಚಂಚಲತೆ, ಪ್ರತಿ ಪಕ್ಷ ಬಿಜೆಪಿಯ ಸರ್ಕಾರ ರಚನೆ ಯತ್ನ ವಿಫಲಗೊಳಿಸಬೇಕಾದರೆ ಗುಪ್ತಚರ ವಿಭಾಗದ ಅಗತ್ಯತೆ ಇದೆ.