ಬೆಂಗಳೂರು,ಜ.25- ಮೂರು ನಗರಗಳ ಪೆÇಲೀಸ್ ಆಯುಕ್ತರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಗೃಹ ಸಚಿವ ಎಂಬಿ ಪಾಟೀಲ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಮುನಿಸಿಕೊಂಡಿದ್ದಾರೆ. ಎಲ್ಲಾ ಕೆಲಸಗಳನ್ನು ಸಿಎಂ ಮಾಡಿದರೆ ಗೃಹ ಸಚಿವನಾಗಿ ನಾನು ಇರುವುದು ಯಾಕೆ ಎಂದು ಆಪ್ತರ ಬಳಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಗಮನಕ್ಕೆ ಬಾರದೇ ವರ್ಗಾವಣೆ ಮಾಡಲಾಗಿದೆ.ಈ ಕುರಿತು ಸಚಿವನಾಗಿ ನನಗೆ ಗೊತ್ತಿಲ್ಲದೇ ವರ್ಗಾವಣೆ ಮಾಡಿದರೆ ಹೇಗೆ ಎಂದು ಸಿಎಂ ಏಕಪಕ್ಷೀಯ ನಿರ್ಧಾರ ಬಗ್ಗೆ ಗೃಹ ಸಚಿವರಾದ ಎಂಬಿ ಪಾಟೀಲ್ ಗರಂ ಆಗಿದ್ದಾರೆ. ಅಲ್ಲದೇ ಈ ಕುರಿತು ರಾಜ್ಯ ಪೆÇಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜುಗೂ ಅವರಿಗೂ ಎಂಬಿ ಪಾಟೀಲ್ ಪ್ರಶ್ನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಗೃಹ ಖಾತೆಯನ್ನು ವಹಿಸಿಕೊಂಡು ಎಂಬಿ ಪಾಟೀಲ್ ಅವರಿಗೆ ಒಂದು ತಿಂಗಳು ಕಳೆದಿರಲಿಲ್ಲ. ಇದರ ನಡುವೆ ಗುರುವಾರದಂದು ಸಿಎಂ ಕುಮಾರಸ್ವಾಮಿ ಅವರು ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಹುಬ್ಬಳ್ಳಿ-ಧಾರವಾಡ ನಗರದ ಕಮಿಷನರ್ ಆಗಿದ್ದ ಎಂ.ಎನ್ ನಾಗರಾಜ್ ಅವರ ಜಾಗಕ್ಕೆ ಕೆಜಿಎಫ್ ಎಸ್ಪಿ ಆಗಿದ್ದ ಬಿ.ಎಸ್ ಲೋಕೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದು, ಬೆಳಗಾವಿ ನಗರ ಕಮಿಷನರ್ ಆಗಿದ್ದ ಡಿ.ಸಿ ರಾಜಪ್ಪ ಹುದ್ದೆಗೆ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿ ಆಗಿದ್ದ ಪಿ. ರಾಜೇಂದ್ರ ಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಬೆಂಗಳೂರು ಗೃಹ ರಕ್ಷಕ ದಳದ ಕಮಾಂಡೆಂಟ್ ಆಗಿದ್ದ ಆರ್.ರಮೇಶ್ ಅವರನ್ನು ಯೋಜನೆ ಆಧುನೀಕರಣದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಈ ಕುರಿತು ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿರುವ ಪಾಟೀಲ್, ಮುಖ್ಯಮಂತ್ರಿಯವರ ಏಕಪಕ್ಷೀಯ ನಿರ್ಧಾರದ ಕುರಿತು ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.