ನವದೆಹಲಿ: ಮೇಲ್ವರ್ಗದ ಬಡವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲು ಕಲ್ಪಿಸುವ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ನ್ಯಾಯಾಲಯದ ನೋಟಿಸ್ಗೆ ನಾಲ್ಕು ವಾರಗಳಲ್ಲಿ ವಿವರಣೆ ನೀಡಬೇಕು ಎಂದೂ ಸುಪ್ರೀಂ ಕೋರ್ಟ್ ಕೇಂದ್ರ ತಿಳಿಸಿದೆ. ಈ ಕಾನೂನನ್ನು ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ಅವರನ್ನು ಒಳಗೊಂಡ ಪೀಠ ಪರಿಶೀಲನೆ ನಡೆಸಲಿದೆ ಎಂದು ಕೋರ್ಟ್ ತಿಳಿಸಿದೆ. ಆದರೆ, ಕಾನೂನು ಜಾರಿಗೆ ತಡೆ ನೀಡಲು ಸುಪ್ರೀಂ ನಿರಾಕರಿಸಿದೆ.
10% ಮೀಸಲು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನ ಪೀಠ ವಿಚಾರಣೆ ನಡೆಸಿತು.
ಮೀಸಲು 50% ಕ್ಕಿಂತಲೂ ಹೆಚ್ಚಿರಬಾರದು ಎಂದು ಸುಪ್ರೀಂ ಕೋರ್ಟ್ ಮಿತಿ ವಿಧಿಸಿದೆ. ಆದರೆ, ಸದ್ಯದ ಕಾನೂನಿನಿಂದಾಗಿ ಆ ಮಿತಿ ಮೀರಲಿದೆ. ಅಲ್ಲದೆ, 1992ರ ಮಂಡಲ್ ಆಯೋಗದ ಪ್ರಕಾರ ಮೀಸಲಾತಿಗೆ ಆರ್ಥಿಕ ಸ್ಥಿತಿಗತಿ ಮಾನದಂಡವಲ್ಲ. ಹೀಗಾಗಿ ಈ ಕಾನೂನು ಅಸಾಂವಿಧಾನಿಕ ಎಂಬುದು ಅರ್ಜಿದಾರರ ವಾದ. ಇದನ್ನೇ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
Upper-caste 10% quota: Supreme Court issues notice to Centre