ಬೆಂಗಳೂರು, ಜ.24- ರಾಜ್ಯ ಸರ್ಕಾರದ ಬಹುನಿರೀಕ್ಷಿತ ಬಜೆಟ್ ಫೆಬ್ರವರಿ ತಿಂಗಳಲ್ಲಿ ಮಂಡನೆಯಾಗುತ್ತಿದ್ದು, ಅದರಲ್ಲಿ ದೋಸ್ತಿ ಪಕ್ಷಗಳ ಪ್ರಣಾಳಿಕೆ ಭರವಸೆಗಳನ್ನು ಸಮ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರುವುದು ಮತ್ತು ಆಪರೇಷನ್ ಕಮಲದಿಂದ ಮೈತ್ರಿ ಸರ್ಕಾರವನ್ನು ರಕ್ಷಿಸುವ ನಿಟ್ಟಿನಲ್ಲಿ ಇಂದು ಸಂಜೆ ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ.
ಸಂಜೆ 5ಗಂಟೆಗೆ ಕುಮಾರಕೃಪಾದಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಎರಡು ಪಕ್ಷದ ಮುಖಂಡರು ರಣತಂತ್ರ ರೂಪಿಸಲಿದ್ದಾರೆ.
ಬಿಜೆಪಿ ಮೈತ್ರಿ ಸರ್ಕಾರವನ್ನು ಕೆಡವಲು ತನ್ನೆಲ್ಲಾ ಶಾಸಕರನ್ನು ಗುರುಗ್ರಾಮದ ರೆಸಾರ್ಟ್ನಲ್ಲಿಟ್ಟಿದ್ದು, 15 ದಿನಗಳ ಕಾಲ ನಿರಂತರ ಪ್ರಹಸನ ನಡೆಸಿತು.ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದು ಅಲ್ಲಿಂದ ಶಾಸಕರನ್ನು ಏಕಾಏಕಿ ರೆಸಾರ್ಟ್ಗೆ ಸ್ಥಳಾಂತರಿಸುವ ಮೂಲಕ ತಿರುಗೇಟು ನೀಡಿತ್ತು.
ಈ ತಂತ್ರ ಮತ್ತು ಪ್ರತಿ ತಂತ್ರದ ಮೇಲಾಟಗಳಲ್ಲಿ ಆಪರೇಷನ್ ಕಮಲ ವಿಫಲವಾಗಿ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿದ್ದ ಗಂಡಾಂತರ ತಾತ್ಕಾಲಿಕವಾಗಿ ತಪ್ಪಿದೆ. ಆದರೆ, ಬಿಜೆಪಿ ಅಷ್ಟಕ್ಕೆ ಸುಮ್ಮನಾಗಿಲ್ಲ. ಮತ್ತೆ ಕಾರ್ಯಾಚರಣೆಗಿಳಿಯುವ ಮಾಹಿತಿಗಳಿವೆ. ಅದರ ಜತೆಗೆ ರೆಸಾರ್ಟ್ನಲ್ಲಿ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಮತ್ತು ಆನಂದ್ಸಿಂಗ್ ನಡುವಿನ ಹೊಡೆದಾಟ ಕಾಂಗ್ರೆಸ್ನಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಿದೆ.
ಬಿಜೆಪಿ ಸರ್ಕಾರ ಕೆಡವಲು ಪ್ರಯತ್ನಿಸುತ್ತಿದೆ.ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ವ್ಯೂಹ ರಚಿಸುತ್ತಿದೆ. ಬಿಜೆಪಿಯ ಐದಾರು ಮಂದಿ ಶಾಸಕರು ದೋಸ್ತಿ ಸರ್ಕಾರದ ಪ್ರಮುಖರ ಜತೆ ಸಂಪರ್ಕದಲ್ಲಿರುವುದು ಗುಟ್ಟಾಗೇನು ಉಳಿದಿಲ್ಲ.
ಈಗ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಮೂರು ಪಕ್ಷದ ಶಾಸಕರು ರೆಸಾರ್ಟ್ನಿಂದ ಹೊರಗುಳಿದು ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ.ಬಿಜೆಪಿಯ ಆಪರೇಷನ್ ಕಮಲ ನಡೆಸುವ ಅವಕಾಶಕ್ಕಿಂತಲೂ ಮಿತ್ರ ಪಕ್ಷಗಳಾದ ಜೆಡಿಎಸ್ -ಕಾಂಗ್ರೆಸ್ಗೆ ಬಿಜೆಪಿ ಶಾಸಕರನ್ನು ಸೆಳೆಯಲು ಹೆಚ್ಚು ಅವಕಾಶಗಳಿವೆ.
ಹೀಗಾಗಿ ಫೆಬ್ರವರಿಯಲ್ಲಿ ಆರಂಭಗೊಳ್ಳುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆಯಾದರೆ ವಿಶ್ವಾಸಮತಕ್ಕೆ ಅಗತ್ಯವಾದ ಸಂಖ್ಯಾಬಲವನ್ನು ಕ್ರೂಢೀಕರಿಸಲು ಮಿತ್ರ ಪಕ್ಷಗಳು ಬಿಜೆಪಿ ಶಾಸಕರನ್ನು ಸೆಳೆಯಲು ಆರಂಭಿಸಿದ್ದಾರೆ.
ಈ ನಿಟ್ಟಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಅಥವಾ ಜೆಡಿಎಸ್ಗೆ ಸೇರಬಹುದಾದ ಶಾಸಕರಿಗೆ ಯಾವ ರೀತಿಯ ಸ್ಥಾನಮಾನ ನೀಡಬಹುದು ಎಂಬುದರ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚಿಸಲಾಗುತ್ತಿದೆ.
ಅದರ ಜತೆಗೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಆದ ಅನಾಹುತಗಳು ಮತ್ತು ಅದರಿಂದ ಆದ ಡ್ಯಾಮೆಜ್ ಕಂಟ್ರೋಲ್ಗೆ ಮಾಡಬೇಕಾದ ಪ್ರಯತ್ನಗಳ ಬಗ್ಗೆಯೂ ಸಮನ್ವಯ ಸಮಿತಿಯಲ್ಲಿ ಚರ್ಚಿಸಲಾಗುತ್ತದೆ.
ಎಲ್ಲಕ್ಕಿಂತ ಪ್ರಮುಖವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಮುಂದಿನ ಬಜೆಟ್ನಲ್ಲಿ ಅನುಷ್ಠಾನಕ್ಕೆ ತರುವುದು ಪ್ರಥಮ ಆದ್ಯತೆಯಾಗಿದ್ದು, ಆ ನಿಟ್ಟಿನಲ್ಲಿ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗಲಿದೆ.ಜತೆಗೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇನ್ನಷ್ಟು ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡುವ ಅನಿವಾರ್ಯತೆ ಇದೆ.
ಈಗಾಗಲೇ ಸುಮಾರು 9 ತಿಂಗಳು ಆಡಳಿತಾವಧಿ ಪೂರ್ಣಗೊಳಿಸಿರುವ ಕುಮಾರಸ್ವಾಮಿಯವರು ರಾಜ್ಯದ ಆರ್ಥಿಕ ಸ್ಥಿತಿಗತಿ ಮೇಲೆ ಹಿಡಿತ ಹೊಂದಿದ್ದಾರೆ.
ಸಿದ್ದರಾಮಯ್ಯ ಅವರು ಅತಿ ಹೆಚ್ಚು ಬಜೆಟ್ಗಳನ್ನು ಮಂಡಿಸಿ ಬಜೆಟ್ ತಜ್ಞ ಎಂದೇ ಪ್ರಖ್ಯಾತರಾಗಿದ್ದಾರೆ.ಹೀಗಾಗಿ ಅವರ ಸಲಹೆ-ಸೂಚನೆಗಳು ಮುಂದಿನ ಬಜೆಟ್ಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆಗಳಿವೆ.
ಈ ಎಲ್ಲಾ ಅಂಶಗಳನ್ನೊಳಗೊಂಡಂತೆ ಸುದೀರ್ಘ ಚರ್ಚೆಯ ಸಮನ್ವಯ ಸಮಿತಿ ಸಭೆ ಇಂದು ಸಂಜೆ ನಡೆಯಲಿದೆ.