ಫೆ.2ರಂದು ಮಾಹಿತಿ ಹಕ್ಕು ಕಾಯ್ದೆಯಡಿ ತೀರ್ಪು ನೀಡುವ ವಿಧಾನ ಕುರಿತ ಕಾರ್ಯಗಾರ

Varta Mitra News

ಬೆಂಗಳೂರು, ಜ.24- ಕರ್ನಾಟಕ ಮಾಹಿತಿ ಆಯೋಗವು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ತೀರ್ಪು ನೀಡುವ ವಿಧಾನ ಕುರಿತ ಒಂದು ದಿನದ ಕಾರ್ಯಾಗಾರವನ್ನು ಫೆ.2ರಂದು ಆಯೋಜಿಸಿದೆ.

ಆಯೋಗದ ಮುಖ್ಯ ಮಾಹಿತಿ ಆಯುಕ್ತ ಎನ್.ಕೃಷ್ಣಮೂರ್ತಿ ಅವರು ಈ ವಿಚಾರವನ್ನು ಪ್ರಕಟಿಸಿದ್ದು, ಫೆ.2ರಂದು ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದ್ದಾರೆ.

ಅಂದು ಸುಪ್ರೀಂಕೋರ್ಟ್‍ನ ನ್ಯಾಯಾಧೀಶರಾದ ಅಬ್ದುಲ್ ನಜೀರ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದು, ರಾಜ್ಯ ಹೈಕೋರ್ಟ್‍ನ ಹಂಗಾಮಿ ಮುಖ್ಯ ನ್ಯಾಯಾಧೀಶ, ನ್ಯಾಯಮೂರ್ತಿ ಎನ್.ನಾರಾಯಣಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸುಪ್ರೀಂಕೋರ್ಟ್‍ನ ನ್ಯಾಯಾಧೀಶರಾದ ದಿನೇಶ್ ಮಹೇಶ್ವರಿ ಹಾಗೂ ರಾಜ್ಯ ಹೈಕೋರ್ಟ್‍ನ ನ್ಯಾಯಾಧೀಶರಾದ ದೀಕ್ಷಿತ್ ಕೃಷ್ಣಶ್ರೀಪಾದ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮಾಹಿತಿ ಆಯೋಗದ ಇತಿಹಾಸದಲ್ಲಿ ಮೊದಲ ಬಾರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ತೀರ್ಪು ನೀಡುವ ವಿಧಾನದ ಬಗ್ಗೆ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ಮಾಹಿತಿ ಹಕ್ಕಿಗೆ ಸಂಬಂಧಿಸಿದ ಕಾಯ್ದೆ ಮತ್ತು ನಿಯಮಾವಳಿಗಳು ಮಾತ್ರವಲ್ಲದೆ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‍ಗಳು ನೀಡಿರುವ ತೀರ್ಪುಗಳನ್ನು ಒಳಗೊಂಡ ಬೆಳಕಿನೆಡೆಗೆ ಕೈಪಿಡಿ ಬಿಡುಗಡೆ ಮಾಡಲಾಗುತ್ತದೆ. ಜತೆಗೆ ಮಾಹಿತಿ ವಿಷಯಕ್ಕೆ ಸಂಬಂಧಿಸಿದ ಆನ್‍ಲೈನ್ ಪೊರ್ಟನ್‍ಗೆ ಕೂಡ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಭೂಪಾಲ್ ನ್ಯಾಷನಲ್ ಲಾ ಇನ್ಸ್‍ಟಿಟ್ಯೂಟ್ ಯೂನಿರ್ವಸಿಟಿಯ ಕುಲಪತಿ ಡಾ.ವಿ.ವಿಜಯಕುಮಾರ್ ಅವರು ಅಧಿವೇಶನದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮೂಲಭೂತ ಹಕ್ಕುಗಳನ್ನು ಸಾಕಾರಗೊಳಿಸಲು ಮಾಹಿತಿ ಹಕ್ಕು ಕಾಯ್ದೆ ಒಂದು ಸಾಧನ ಹಾಗೂ ಮಾಹಿತಿ ಹಕ್ಕಿನ ಮಹತ್ವ ಕುರಿತ ಎರಡನೇ ಅಧಿವೇಶನದಲ್ಲಿ ಸರ್ವೋಚ್ಚ ನ್ಯಾಯಾಲದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಶಿವರಾಜ್‍ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಮಾಹಿತಿ ಆಯೋಗದ ಮಾಜಿ ಆಯುಕ್ತರೂ ಆದ ಬೆನೆಟ್ ವಿವಿಯ ಕಾನೂನು ಪ್ರಾಧ್ಯಾಪಕ ಡಾ.ಏ.ಶ್ರೀಧರ್ ಆಚಾರ್ಯರು ಅವರು ಪ್ರಧಾನ ಭಾಷಣ ಮಾಡಲಿದ್ದಾರೆ.

ಕಾಮನ್‍ವೆಲ್ತ್ ವ್ಯೂಮನ್ ರೈಟ್ಸ್ ಇನಿಷಿಯೇಟಿವ್‍ನ ವೆಂಕಟೇಶ್ ನಾಯಕ್ ಅವರು ಮಾಹಿತಿ ಆಯೋಗದ ಅಧಿಕಾರದ ಹೊರ ರೇಖೆಗಳು-ಕ್ಷಿಪ್ರ ನೋಟ ಆಧರಿಸಿ ಕಾನೂನು ರೂಪಿಸುವಿಕೆ ಕುರಿತು ಮಾಹಿತಿ ನೀಡಲಿದ್ದಾರೆ.

ಸಮಾರೋಪ ಸಮಾರಂಭಕ್ಕೆ ತೆರೆ ಬೀಳುವ ಮುನ್ನ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಆಮಂತ್ರಿತರಿಗೆ, ಸಂವಾದಕ್ಕೆ ಇದೇ ವೇಳೆ ವೇದಿಕೆ ಕಲ್ಪಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ