ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಸರ್ಕಾರ ನಿಲ್ಲಿಸಿಲ್ಲ; ಡಿಸಿಎಂ ಪರಮೇಶ್ವರ್

ಬೆಂಗಳೂರು, ಜ.24- ಸರ್ಕಾರ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ನಿಲ್ಲಿಸಿಲ್ಲ. ಆದರೆ, ಯಾವ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಬೇಕು ಎಂಬುದರ ಬಗ್ಗೆ ನಾನು ಮತ್ತು ಮುಖ್ಯಮಂತ್ರಿಯವರು ಕುರಿತು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಸದಾಶಿವನಗರದ ತಮ್ಮ ಕಚೇರಿಯಲ್ಲಿಂದು ಇನ್ಫೋಸಿಸ್‍ನ ಸಂಸ್ಥಾಪಕರಾದ ನಾರಾಯಣಮೂರ್ತಿ ಅವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಯಾವುದೇ ಜಯಂತಿಯನ್ನು ನಿಲ್ಲಿಸುವ ಉದ್ದೇಶ ಹೊಂದಿಲ್ಲ. ಈ ಹಿಂದೆ ಸಂದರ್ಭಕ್ಕನುಗುಣವಾಗಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡಲಾಗಿತ್ತು.ಈ ಬಾರಿ ಕಾರ್ಯಕ್ರಮ ನಡೆಯಲಿದೆ.ಆದರೆ, ವಾರಪೂರ್ತಿ ಸಪ್ತಾಹದ ಮಾದರಿಯಲ್ಲಿ ಕಾರ್ಯಕ್ರಮ ಮಾಡಬೇಕೆ? ಬೃಹತ್ ಕಾರ್ಯಕ್ರಮ ಮಾಡಬೇಕೆ ಎಂಬುದನ್ನು ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಹೇಳಿದರು.

ಮೈಸೂರಿನಲ್ಲಿರುವ ನ್ಯಾಷನಲ್ ಇನ್ಸ್‍ಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಸಂಸ್ಥೆ ಕೆಲವು ರೂಪುರೇಷೆಗಳನ್ನು ಸಿದ್ದಪಡಿಸಿದೆ.ಜತೆಗೆ ಬೆಂಗಳೂರು ಅಭಿವೃದ್ಧಿಗೂ ಕೈ ಜೋಡಿಸುವ ಭರವಸೆ ನೀಡಿದ್ದಾರೆ ಎಂದರು.

ನಾರಾಯಣಮೂರ್ತಿ ಅವರು ಮೈಸೂರಿನ ನ್ಯಾಷನಲ್ ಇನ್ಸ್‍ಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರು. ಹೀಗಾಗಿ ಆ ಸಂಸ್ಥೆಯನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸುವ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ರೂಪಿಸಿದ್ದಾರೆ. ಇದರ ಬಗ್ಗೆ ನನ್ನೊಂದಿಗೆ ಇಂದು ಚರ್ಚೆ ನಡೆಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆಯೂ ಅವರು ಕೆಲವು ಸಲಹೆ, ಸೂಚನೆಗಳನ್ನು ನೀಡಿದ್ದು, ಸರ್ಕಾರದ ಜತೆ ಕೈ ಜೋಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿ ವೇಳೆ ಹಾಜರಿರಬೇಕಾದವರ ಪಟ್ಟಿಯನ್ನು ಮೊದಲೇ ಸಿದ್ದಪಡಿಸಲಾಗಿತ್ತು.ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಗಳೇ ಆ ಪಟ್ಟಿ ತಯಾರಿಸಿದ್ದರು. ಅದರಂತೆ ಪಟ್ಟಿಯಲ್ಲಿರುವವರನ್ನು ಮಾತ್ರ ಒಳಗೆ ಬಿಡಲು ಐಪಿಎಸ್ ಅಧಿಕಾರಿ ಡಾ.ದಿವ್ಯಾ ವಿ.ಗೋಪಿನಾಥ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಸಚಿವ ಸಾ.ರಾ.ಮಹೇಶ್ ಅವರ ಮುಖ ಪರಿಚಯ ಅವರಿಗೆ ಇರಲಿಲ್ಲ. ಹೀಗಾಗಿ ಗೊಂದಲ ಉಂಟಾಗಿದೆ.ಇದ್ಯಾವುದೂ ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಶಾಂತಿಯುತವಾಗಿ ಕ್ರಿಯಾ ಸಮಾಧಿ ನಡೆದಿದೆ.ಈ ವಿಷಯವನ್ನು ಅನಗತ್ಯವಾಗಿ ಬೆಳೆಸಿ ವಿವಾದಗಳನ್ನು ಬೆಳೆಸದೆ ಹಾಗೆ ಬಿಟ್ಟಿಬಿಡೋಣ ಎಂದು ಪರಮೇಶ್ವರ್ ತಿಳಿಸಿದರು.

ಆನಂದ್‍ಸಿಂಗ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಶಾಸಕ ಗಣೇಶ್‍ನನ್ನು ಪೊಲೀಸರು ಹುಡುಕುತ್ತಿದ್ದಾರೆ.ಶೀಘ್ರವೇ ಗಣೇಶ್ ಅವರ ಬಂಧನವಾಗಲಿದೆ.ಎಫ್‍ಐಆರ್ ದಾಖಲಾಗಿರುವುದರಿಂದ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ.ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪಕ್ಷದ ವತಿಯಿಂದ ಸಮಿತಿ ರಚಿಸಲಾಗಿದೆ. ಸೂಕ್ತ ತನಿಖೆ ನಡೆಸಿ ವರದಿ ತಯಾರಿಸಿ ಪಕ್ಷದ ಅಧ್ಯಕ್ಷರಿಗೆ ಅದನ್ನು ನೀಡುತ್ತೇವೆ. ಆನಂತರ ಹಲ್ಲೆ ನಡೆದ ಗಣೇಶ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಇಂದು ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗುವುದು.ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸುತ್ತಿರುವ 2019-20ನೇ ಸಾಲಿನ ಬಜೆಟ್‍ನಲ್ಲಿ ಎರಡು ಪಕ್ಷಗಳು ಜತೆಯಾಗಿ ರಚಿಸಿಕೊಂಡಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಆಧರಿಸಿ ಬಜೆಟ್ ತಯಾರುಗೊಳ್ಳುತ್ತಿದೆ.ಸಾಲ ಮನ್ನಾಕ್ಕೆ 45ಸಾವಿರ ಕೋಟಿ ವೆಚ್ಚವಾಗುತ್ತಿದ್ದು, ಅದರ ಆರ್ಥಿಕ ಹೊಂದಾಣಿಕೆ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ