ಬೆಂಗಳೂರು,ಜ.24-ಸಮ್ಮಿಶ್ರ ಸರ್ಕಾರವನ್ನು ಹೆಚ್ಚಿನ ದಿನಗಳ ಕಾಲ ಮುಂದುವರೆಯಲು ಅವಕಾಶ ನೀಡಬಾರದೆಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ಮೊದಲ ಹಂತದಲ್ಲಿ ಆರು ಶಾಸಕರಿಂದ ರಾಜೀನಾಮೆ ಕೊಡಿಸುವ ಲೆಕ್ಕಾಚಾರಕ್ಕೆ ಬಂದಿದೆ.
ಇದೇ 31ರಂದು ತುಮಕೂರಿನ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ್ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮ ಮುಗಿದ ಬಳಿಕ ಕಾಂಗ್ರೆಸ್ ಶಾಸಕರ ರಾಜೀನಾಮೆ ಪ್ರಕ್ರಿಯೆಗೆ ಚಾಲನೆ ದೊರಕಲಿದೆ.
ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಅವರ ಪುಣ್ಯಾರಾಧನೆ ಕಾರ್ಯಕ್ರಮ ಮುಗಿಯುವವರೆಗೂ ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಖುದ್ದು ಕೇಂದ್ರ ನಾಯಕರೇ ನಿರ್ದೇಶನ ನೀಡಿರುವುದರಿಂದ ರಾಜೀನಾಮೆ ನೀಡುವುದು ವಿಳಂಬವಾಗಿದೆ ಎನ್ನಲಾಗುತ್ತಿದೆ.
ಮುಂಬೈ ರೆಸಾರ್ಟ್ನಲ್ಲಿ ಕಳೆದ 10 ದಿನಗಳಿಂದ ವಾಸ್ತವ್ಯ ಹೂಡಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ, ಉಮೇಶ್ ಜಾಧವ್, ಪ್ರತಾಪ್ಗೌಡ ಪಾಟೀಲ್ ಫೆಬ್ರವರಿ ಮೊದಲ ವಾರದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ವಾಸ್ತವವಾಗಿ ಕಾಂಗ್ರೆಸ್ನ ಭಿನ್ನಮತೀಯ ಶಾಸಕರು ಶುಕ್ರವಾರ ಇಲ್ಲವೇ ಸೋಮವಾರ ರಾಜೀನಾಮೆ ನೀಡಲು ವಿಧಾನಸಭೆಯ ಸ್ಪೀಕರ್ ಅವರ ಸಮಯಾವಕಾಶ ಕೋರಿದ್ದರು.
ಶ್ರೀಗಳು ಲಿಂಗೈಕ್ಯರಾಗಿದ್ದರಿಂದ ಅಪಾರ ಸಂಖ್ಯೆ ಭಕ್ತರು ನೋವಿನಲ್ಲಿರುವ ಸಂದರ್ಭದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಕೆಲಸಕ್ಕೆ ಕೈ ಹಾಕಿದರೆ ಜನತೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಭೀತಿಯಿಂದಾಗಿ ಆಪರೇಷನ್ ಕಮಲವನ್ನು ಮುಂದೂಡುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಪುಣ್ಯಾರಾಧನೆ ಮುಗಿದ ನಂತರ ಅತೃಪ್ತ ಆರು ಮಂದಿ ಶಾಸಕರು ಮೊದಲ ಹಂತದಲ್ಲಿ ರಾಜೀನಾಮೆ ನೀಡಿ ಬಳಿಕ ಇನ್ನಷ್ಟು ಸಂಖ್ಯೆಯ ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ದೋಸ್ತಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮುಂದಾಗಿದೆ.
ಈಗಾಗಲೇ ಪಕ್ಷದಿಂದ ಒಂದು ಹೆಜ್ಜೆ ದೂರ ಹೋಗಿರುವ ಭಿನ್ನಮತೀಯರು ಹಾಗೂ ಬಲವಂತವಾಗಿ ಪಕ್ಷದಲ್ಲಿ ಉಳಿದುಕೊಂಡಿರುವ ಅತೃಪ್ತರು ಕೂಡ ಯಾವುದೇ ಸಂದರ್ಭದಲ್ಲಿ ತಮ್ಮ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂಬುದು ಬಿಜೆಪಿ ನಾಯಕರ ನಂಬಿಕೆ.
ಮೊದಲು ಒಂದಿಷ್ಟು ಶಾಸಕರು ರಾಜೀನಾಮೆ ಕೊಟ್ಟರೆ ಬಳಿಕ ಸ್ಥಾನಮಾನ ಸಿಗದೆ ಅತೃಪ್ತಗೊಂಡಿರುವವರು ತನ್ನಿಂದ ತಾನೆ ಬರುತ್ತಾರೆ, ಗಣೇಶ್ ಪ್ರಕರಣದಿಂದಾಗಿ ಒಂದಿಷ್ಟು ಶಾಸಕರು ಅಸಮಾಧಾನಗೊಂಡಿರಬಹುದು. ಹಾಗಾಗಿ ಅವರ್ಯಾರು ಕಾಂಗ್ರೆಸ್ ಪಕ್ಷದಲ್ಲಿ ಉಳಿಯುವ ಸಾಧ್ಯತೆಗಳು ಇಲ್ಲ ಎಂಬದು ಬಿಜೆಪಿಯವರ ವಾದ.
ಒಟ್ಟು 12ರಿಂದ 15 ಶಾಸಕರನ್ನು ಗುರಿಯಾಗಿಟ್ಟುಕೊಂಡು ರಾಜೀನಾಮೆ ಕೊಡಿಸುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಶಾಕ್ ಕೊಡಲು ಕಮಲ ಪಡೆ ಸಜ್ಜಾಗುತ್ತಿದೆ.
ಫೆಬ್ರವರಿ 8ರಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಸಕ್ತ ವರ್ಷದ ಬಜೆಟ್ ಮಂಡನೆ ಮಾಡಲು ಮುಂದಾಗಿದ್ದಾರೆ. ಅಷ್ಟರೊಳಗೆ ಸರ್ಕಾರವನ್ನು ಕೆಡವಲು ಬೇಕಾದ ಕಾರ್ಯತಂತ್ರವನ್ನು ಬಿಜೆಪಿ ರೂಪಿಸಿದೆ.