ಈ ಬಾರಿ ರಾಷ್ಟ್ರಪತಿ ಪದಕಕ್ಕೆ ರಾಜ್ಯದಿಂದ ಯಾವುದೇ ಅಧಿಕಾರಿ ಆಯ್ಕೆಯಾಗಿಲ್ಲ

ಬೆಂಗಳೂರು,ಜ.24- ಹೊಂದಾಣಿಕೆ ಕೊರತೆ , ವೃತ್ತಿ ವೈಷಮ್ಯ, ಒಬ್ಬರ ವಿರುದ್ಧ ಮತ್ತೊಬ್ಬರ ಮಸಲತ್ತು, ಪರಸ್ಪರ ಕಾಲೆಳೆಯುವಿಕೆ ಪರಿಣಾಮ ಈ ಬಾರಿ ರಾಜ್ಯದ ಯಾವುದೇ ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಅರ್ಹತೆ ಗಿಟ್ಟಿಸಿಕೊಂಡಿಲ್ಲ.

ಕಾರಣ ರಾಷ್ಟ್ರಪತಿ ಭವನಕ್ಕೆ ಕರ್ನಾಟಕದಿಂದ ಒಬ್ಬೇ ಒಬ್ಬ ಪೊಲೀಸ್ ಅಧಿಕಾರಿಗಳ ಹೆಸರನ್ನು ರಾಷ್ಟ್ರಪತಿ ಪದಕಕ್ಕೆ ಗೃಹ ಇಲಾಖೆ ಕಳುಹಿಸಿಕೊಟ್ಟಿಲ್ಲ. ಇದರಿಂದ ಪ್ರತಿ ವರ್ಷ ಸಿಗುತ್ತಿದ್ದ ಶೌರ್ಯ ಶ್ಲಾಘನೀಯ ಮತ್ತು ಮರಣೋತ್ತರ ಪ್ರಶಸ್ತಿಗಳು ಕೈ ತಪ್ಪಿದೆ.

ಸಾಮಾನ್ಯವಾಗಿ ಜ.26ರಂದು ಪ್ರತಿ ವರ್ಷ ಅತ್ಯುತ್ತಮ ಸೇವೆ ಸಲ್ಲಿಸಿದ ಇಲ್ಲವೇ ಸೇವೆಯಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಪೊಲೀಸ್ ಅಧಿಕಾರಿಗಳ ಸೇವೆಯನ್ನು ಗುರುತಿಸಿ ಗಣರಾಜ್ಯೋತ್ಸವ ದಿನದಂದು ಶೌರ್ಯ ಪ್ರಶಸ್ತಿ, ಮರಣೋತ್ತರ ಹಾಗೂ ಪ್ರಶಂಸನೀಯ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು.

ಈ ಮೂಲಕ ಅಧಿಕಾರಿಗಳಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ಸೇವೆ ಸಲ್ಲಿಸಿದವರನ್ನು ಸರ್ಕಾರ ಗುರುತಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು.

ಬಹುದಶಕಗಳ ನಂತರ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಿಂದ ಒಬ್ಬೇ ಒಬ್ಬ ಪೊಲೀಸ್ ಅಧಿಕಾರಿಗಳ ಹೆಸರನ್ನು ರಾಷ್ಟ್ರಪತಿ ಪ್ರಶಸ್ತಿಗೆ ಶಿಫಾರಸು ಮಾಡಿಲ್ಲ. ಇದರಿಂದ ಪೊಲೀಸರ ನಡುವೆ ಎಷ್ಟು ಸಮನ್ವಯದ ಕೊರತೆ, ವೃತ್ತಿ ವೈಷಮ್ಯ ಇದೆ ಎಂಬುದು ಬಟ್ಟಬಯಲಾಗಿದೆ.

ಕಳೆದ ವರ್ಷ ರಾಜ್ಯದ 22 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪ್ರಶಸ್ತಿ ಲಭಿಸಿತ್ತು.ಸುಮಾರು ಮೂರು ದಶಕಗಳ ನಂತರ ಪ್ರಶಸ್ತಿ ಕೈ ತಪ್ಪಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಕಾರಣವೇನು?:
ಈ ಬಾರಿ ರಾಷ್ಟ್ರಪತಿಗಳ ಪ್ರಶಸ್ತಿಗೆ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 33 ಮಂದಿ ಪೊಲೀಸರನ್ನು ರಾಷ್ಟ್ರಪತಿ ಪ್ರಶಸ್ತಿಗೆ ಶಿಫಾರಸು ಮಾಡಲು ಗೃಹ ಇಲಾಖೆ ಮುಂದಾಗಿತ್ತು.

ಅತ್ಯುತ್ತಮ ಸೇವೆಯನ್ನು ಗುರುತಿಸಿ ಅಂಥವರ ಸ್ವವಿವರಗಳನ್ನು ನೀಡುವಂತೆ ಪ್ರತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪೊಲೀಸ್ ಮಹಾನಿರ್ದೇಶಕರಿಂದ ಸುತ್ತೋಲೆ ಹೊರಡಿಸಲಾಗುತ್ತದೆ.

ಆಯಾ ವರ್ಷದಲ್ಲಿ ಅಧಿಕಾರಿಗಳು ಮಾಡಿರುವ ಸೇವೆಯನ್ನು ಪರಿಗಣಿಸಿ ಇಂಥವರನ್ನು ರಾಷ್ಟ್ರಪತಿ ಪ್ರಶಸ್ತಿಗೆ ಪರಿಗಣಿಸಬಹುದೆಂದು ಎಸ್ಪಿಯವರು ಡಿಜಿಗೆ ಶಿಫಾರಸು ಮಾಡಬಹುದು.ಈ ಶಿಫಾರಸನ್ನು ಗೃಹ ಇಲಾಖೆಗೆ ವರ್ಗಾಯಿಸಲಾಗುತ್ತದೆ. ನಂತರ ರಾಷ್ಟ್ರಪತಿ ಭವನಕ್ಕೆ ಕಳುಹಿಸಿಕೊಡಲಾಗುತ್ತದೆ.

ಈ ಬಾರಿಯೂ ಇಂಥ ಪ್ರಶಸ್ತಿಗೆ ಅರ್ಹರಾದ 33 ಅಧಿಕಾರಿಗಳನ್ನು ಗುರುತಿಸಲಾಗಿತ್ತು.ಸಾಮಾನ್ಯವಾಗಿ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಸುತ್ತೋಲೆ ಹೊರಡಿಸಿದರೆ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಪಟ್ಟಿಯನ್ನು ರಾಷ್ಟ್ರಪತಿಗೆ ರವಾನಿಸಬೇಕು.

ಪೊಲೀಸ್ ಇಲಾಖೆಯಲ್ಲಿ ಎಷ್ಟು ವೃತ್ತಿ ವೈಷಮ್ಯವಿದೆ ಎಂದರೆ ಅವರ ಹೆಸರನ್ನು ನಾನೇಕೆ ಶಿಫಾರಸು ಮಾಡಬೇಕು, ನನಗೆ ಬಾರದಿದ್ದರೂ ಚಿಂತೆಯಿಲ್ಲ ಅವರಿಗೆ ಲಭಿಸಬಾರದು ಎಂಬ ಕಾರಣಕ್ಕೆ ಕೆಲವರ ಹೆಸರನ್ನೇ ಪರಿಗಣನೆ ಮಾಡಿಲ್ಲ.

ಪೊಲೀಸ್ ಇಲಾಖೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದರೆ ಅಂಥವರಿಗೆ ಪ್ರಶಂಸನೀಯ ಪದಕ, 18 ವರ್ಷ ಮೇಲ್ಪಟ್ಟು ಕರ್ತವ್ಯನಿರತ ವೇಳೆ ಸೇವೆಯಲ್ಲಿ ಸಾವನ್ನಪ್ಪಿದರೆ ಮರಣೋತ್ತರ ಪ್ರಶಸ್ತಿ ಹಾಗೂ ಉತ್ತಮ ಸೇವೆ ಸಲ್ಲಿಸಿದವರಿಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಗುತ್ತದೆ.

ರಾಷ್ಟ್ರಪತಿ ಪ್ರಶಸ್ತಿಗೆ ಪುರಸ್ಕøತರಾದವರು ಜ.26ರ ಗಣರಾಜ್ಯೋತ್ಸವ ದಿನದಂದು ರಾಜಭವನದಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಆಯಾ ರಾಜ್ಯದ ರಾಜ್ಯಪಾಲರು ರಾಷ್ಟ್ರಪತಿಗಳ ಪರವಾಗಿ ಅಧಿಕಾರಿಗಳು ಸನ್ಮಾನಿಸುತ್ತಾರೆ.

ಬಂಗಾರದ ಪದಕ, ಪ್ರಶಸ್ತಿ, ಪ್ರಮಾಣ ಪತ್ರವನ್ನು ಇದು ಒಳಗೊಂಡಿರುತ್ತದೆ.

ಈ ಬಾರಿ ರಾಜ್ಯದ ಯಾವುದೇ ಪೊಲೀಸ್ ಅಧಿಕಾರಿಗಳನ್ನು ಶಿಫಾರಸು ಮಾಡದ ಕಾರಣ ಅರ್ಹರಿಗೆ ಸಿಗಬೇಕಾಗಿದ್ದ ಪ್ರಶಸ್ತಿ ಕೈತಪ್ಪಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ