ಬೆಂಗಳೂರು, ಜ.24-ಅತೃಪ್ತಗೊಂಡಿರುವ ಶಾಸಕ ಉಮೇಶ್ ಜಾದವ್ ಅವರನ್ನು ಮನವೊಲಿಸುವ ಯತ್ನವನ್ನು ಕಾಂಗ್ರೆಸ್ ಮುಖಂಡರು ನಡೆಸಿದ್ದಾರೆ.
ಕಾಂಗ್ರೆಸ್ನಿಂದ ಬೇಸರಗೊಂಡು ಬಿಜೆಪಿ ಪಾಳಯಕ್ಕೆ ಜಿಗಿಯಲು ಮುಂದಾಗಿ ಮುಂಬೈ ರೆಸಾರ್ಟ್ನಲ್ಲಿ ಕಳೆದ 10 ದಿನಗಳಿಂದ ಇದ್ದಾರೆ ಎನ್ನಲಾಗಿದ್ದ ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾದವ್ ಅವರು ತಮ್ಮ ತಂದೆಯ ಪುಣ್ಯಸ್ಮರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ವಕ್ಷೇತ್ರಕ್ಕೆ ಹಿಂದಿರುಗಿರುವುದರಿಂದ ಅವರನ್ನು ಭೇಟಿ ಮಾಡಿರುವ ಹಲವು ಕಾಂಗ್ರೆಸ್ ಮುಖಂಡರು ಅವರನ್ನು ಮನವೊಲಿಸುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ರಾಥೋಡ್ ಅವರು ಉಮೇಶ್ ಜಾದವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.ಆಪರೇಷನ್ ಕಮಲದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಆರಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ಗೆ ಕೈ ಕೊಡಲಿದ್ದಾರೆ ಎಂಬುದು ಖಚಿತವಾಗಿದ್ದು, ಆ ಗುಂಪಿನಲ್ಲಿ ಜಾದವ್ ಅವರು ಕೂಡ ಇದ್ದರು.
ಇಂದು ಕ್ಷೇತ್ರಕ್ಕೆ ಹಿಂದಿರುಗಿದ ಅವರನ್ನು ಭೇಟಿ ಮಾಡಿರುವ ಹಲವು ಕಾಂಗ್ರೆಸ್ ಮುಖಂಡರು ಮನವೊಲಿಸುವ ಯತ್ನ ನಡೆಸಿದ್ದಾರೆ.ಈಗಾಗಲೇ ಜಾದವ್ ಅವರು ಕೂಡ ನಾನು ಪಕ್ಕಾ ಕಾಂಗ್ರೆಸಿಗ.ಕಾಂಗ್ರೆಸ್ ತೊರೆಯುವ ಯಾವುದೇ ನಿರ್ಧಾರ ಮಾಡಿಲ್ಲ. ಬಿಜೆಪಿ ಸೇರುವುದಾದರೆ ಮತದಾರರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.