ಬೆಂಗಳೂರು, ಜ.24- ಟೆಂಟ್ಪೆಗ್ಗಿಂಗ್, ಮ್ಯೂಲ್ ಟ್ರಕ್ ರೈಡಿಂಗ್ ಟೀಮ್, ರೂಮ್ ಇಂಟರ್ವೆನ್ಷನ್ ಹಾಗೂ ನೂರಾರು ಮಕ್ಕಳು ನಡೆಸಿಕೊಡುವ ಕಾರ್ಗಿಲ್ ಕಥನ, ನಮ್ಮ ಭಾರತ ಭವ್ಯ ಭಾರತ ಈ ಬಾರಿಯ 70ನೆ ಗಣರಾಜ್ಯೋತ್ಸವದ ವಿಶೇಷ ಹೈಲೈಟ್ಸ್…
ಎಲೆಕ್ಟ್ರಾನಿಕ್ ಸಿಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಮ್ಸ್ ಪ್ರೌಢಶಾಲೆಯ 800 ಮಕ್ಕಳು ನಮ್ಮ ಭಾರತ ಭವ್ಯ ಭಾರತ ಹಾಗೂ ಬನ್ನೇರುಘಟ್ಟದ ನವಭಾರತ ನಿರ್ಮಾಣ ವಿದ್ಯಾಮಂದಿರ ಹಾಗೂ ಅಂಜನಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 700 ಮಕ್ಕಳು ಕಾರ್ಗಿಲ್ ಕಥನ ಎಂಬ ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇಂದಿಲ್ಲಿ ತಿಳಿಸಿದರು.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 70ನೆ ಗಣರಾಜ್ಯೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಬೆಳಗ್ಗೆ 8.58ಕ್ಕೆ ಸರಿಯಾಗಿ ರಾಜ್ಯಪಾಲ ವಿ.ಆರ್.ವಾಲಾ ಅವರು ಪರೇಡ್ ಮೈದಾನಕ್ಕೆ ಆಗಮಿಸಿ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ.ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ ಮಾಡಲಾಗುವುದು ಎಂದರು.
ಧ್ವಜಾರೋಹಣದ ನಂತರ ಗೌರವ ರಕ್ಷೆ ಸ್ವೀಕರಿಸಲಿರುವ ರಾಜ್ಯಪಾಲರು ನಂತರ ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದರು.
ಈ ಬಾರಿಯ ಪಥಸಂಚಲನದಲ್ಲಿ ಪೆÇಲೀಸ್, ಸ್ಕೌಟ್ಸ್ ಅಂಡ್ ಗೈಡ್ಸ್, ಎನ್ಸಿಸಿ, ಸೇವಾದಳ ಹಾಗೂ ವಿವಿಧ ಶಾಲಾ ಮಕ್ಕಳನ್ನೊಳಗೊಂಡಂತೆ ಕವಾಯತು ಮತ್ತು ಬ್ಯಾಂಡ್ನ 38 ತುಕಡಿಗಳಲ್ಲಿ ಸುಮಾರು 1500ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುತ್ತಿದ್ದಾರೆ.
ನಗರದ ವಿವಿಧ ಶಾಲೆಯ ಸುಮಾರು 2200ಕ್ಕೂ ಹೆಚ್ಚು ಮಕ್ಕಳು ಮೂರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.ನಂತರ ರಾಜ್ಯಪಾಲರು ಸರ್ವೋತ್ತಮ ಸೇವಾ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು.
ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಲಿದ್ದು, ಬಿ.ಆರ್.ಛಾಯಾ ತಂಡದವರಿಂದ ನಾಡಗೀತೆ ಮತ್ತು ರೈತಗೀತೆ, ವಿವಿಧ ಶಾಲಾ ಮಕ್ಕಳಿಂದ ನಮ್ಮ ಭಾರತ ಭವ್ಯ ಭಾರತ, ಕಾರ್ಗಿಲ್ ಕಥನ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಟೆಂಟ್ ಪೆಗ್ಗಿಂಗ್ ಮ್ಯೂಲ್ ಟ್ರಕ್ ರೈಡಿಂಗ್ ಟೀಮ್, ರೂಮ್ ಇಂಟರ್ವೆನ್ಷನ್ ಕಾರ್ಯಕ್ರಮಗಳು ನೆರವೇರಲಿವೆ.
9 ಸಾವಿರ ಆಸನ ವ್ಯವಸ್ಥೆ: ಈ ಬಾರಿಯ ಗಣರಾಜ್ಯೋತ್ಸವ ವೀಕ್ಷಿಸಲು ಅತಿಗಣ್ಯ, ಗಣ್ಯ, ಇತರೆ ಆಹ್ವಾನಿತರಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕವಾಗಿ 9 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.
ಅತಿಗಣ್ಯ ವ್ಯಕ್ತಿಗಳಿಗೆ 2 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಜಿ-2 ಪ್ರವೇಶದ್ವಾರದ ಮೂಲಕ ಆಗಮಿಸಬೇಕು. ಸ್ವಾತಂತ್ರ್ಯ ಹೋರಾಟಗಾರರು ರಕ್ಷಣಾ ಇಲಾಖೆ ಅಧಿಕಾರಿಗಳಿಗಾಗಿ 2 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಅವರು ಜೀವನ್ ಪ್ರವೇಶದ್ವಾರ ಬಳಕೆ ಮಾಡಿಕೊಳ್ಳಬೇಕು.ಇತರೆ ಎಲ್ಲ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು ಮತ್ತು ಬಿಎಸ್ಎಫ್ ಅಧಿಕಾರಿಗಳಿಗೆ 2 ಸಾವಿರ ಆಸನ ವ್ಯವಸ್ಥೆ ಇದ್ದು, ಜಿ-3 ಪ್ರವೇಶದ್ವಾರದ ಮೂಲಕ ಸಭಾಂಗಣಕ್ಕೆ ಆಗಮಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಇನ್ನು ಸಾರ್ವಜನಿಕರಿಗೆ 3 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಸಮಾರಂಭಕ್ಕೆ ಆಗಮಿಸುವವರು ಜಿ-4 ಪ್ರವೇಶದ್ವಾರ ಬಳಕೆ ಮಾಡಿಕೊಳ್ಳಬಹುದಾಗಿದೆ.
ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಯಾವುದೇ ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಲು ಅಗತ್ಯವಿರುವಷ್ಟು ಆ್ಯಂಬುಲೆನ್ಸ್ ಸೇವೆ, ವೈದ್ಯಕೀಯೇತರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.ಜತೆಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.
ಆಕಸ್ಮಿಕ ಬೆಂಕಿ ಅವಘಡಗಳನ್ನು ನಿಭಾಯಿಸಲು ಮಾಣಿಕ್ ಷಾ ಪರೇಡ್ ಮೈದಾನದ ಸುತ್ತ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಮಂಜುನಾಥ್ ಪ್ರಸಾದ್ ವಿವರಣೆ ನೀಡಿದರು.
ಪೊಲೀಸ್ ಕಣ್ಗಾವಲು: ನಗರ ಪೊಲೀಸ್ ಆಯುಕ್ತ ಸುನಿಲ್ಕುಮಾರ್ ಮಾತನಾಡಿ, ಈ ಬಾರಿಯ ಗಣರಾಜ್ಯೋತ್ಸವಕ್ಕೆ ಪೆÇಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಆಯಾಕಟ್ಟಿನ ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಹಾಗೂ ವ್ಯವಸ್ಥಿತ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
12 ಡಿಸಿಪಿ, 23 ಎಸಿಪಿ, 81 ಇನ್ಸ್ಪೆಕ್ಟರ್, 158 ಪಿಎಸ್ಐ, 117 ಎಎಸ್ಐ, 1072 ಪೊಲೀಸ್ ಕಾನ್ಸ್ಟೆಬಲ್ಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.
ನೀರಿನ ಬಾಟಲ್, ಸಿಗರೇಟ್, ಬೆಂಕಿಪೊಟ್ಟಣ, ಕರಪತ್ರಗಳು, ಬಣ್ಣದ ದ್ರಾವಣಗಳು, ವಿಡಿಯೋ ಮತ್ತು ಸ್ಟಿಲ್ ಕ್ಯಾಮೆರಾ, ಚಾಕು-ಚೂರಿ, ಕಪ್ಪು ಕರವಸ್ತ್ರ, ಮಾದಕ ವಸ್ತು, ಬಾವುಟಗಳನ್ನು ಮೈದಾನಕ್ಕೆ ತರುವುದನ್ನು ನಿಯೋಜಿಸಲಾಗಿದೆ.
ಮೈದಾನದ ಸುತ್ತಮುತ್ತ ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ವಾಹನ ನಿಲುಗಡೆ ಪ್ರದೇಶದಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು ಹಾಗೂ ನಿಗದಿಪಡಿಸಿದ ದ್ವಾರದಲ್ಲಿ ಸಭಾಂಗಣ ಪ್ರವೇಶಿಸಿ ತಮ್ಮ ಆಸನಗಳಲ್ಲಿ ಆಸೀನರಾಗಬೇಕು ಎಂದು ಸುನಿಲ್ಕುಮಾರ್ ಹೇಳಿದರು.