ಬೆಂಗಳೂರು, ಜ.23- ರಕ್ಷಣಾ ಪರಿಕರಗಳ ಉದ್ಯಮ ಹಾಗೂ ಸಂಬಂಧಿತ ಚಟುವಟಿಕೆಗಳ ಸಂಶೋಧನೆ ಮತ್ತು ಸೇವೆಗಳನ್ನು ಖಾಸಗಿ ಒಡೆತನಕ್ಕೆ ನೀಡಲು ಮುಂದಾಗಿರುವುದನ್ನು ಖಂಡಿಸಿ ಇಂದು ಭಾರತೀಯ ರಕ್ಷಣಾ ಪಡೆಗಳ ಉದ್ಯೋಗಿಗಳು ಮುಷ್ಕರ ನಡೆಸಿದರು.
ಜೆಸಿ ನಗರದ ರಕ್ಷಣಾ ಇಲಾಖೆ ಕಚೇರಿ ಬಳಿ ಆರ್ಸಿವಿಲಿಯನ್ ಎಂಪ್ಲಾಯಿಸ್ ಯೂನಿಯನ್, ಸಿಕ್ಯೂಎಎನ್ ಮತ್ತು ಅಖಿಲ ಭಾರತ ರಕ್ಷಣಾ ಪಡೆಯ ಉದ್ಯೋಗಿಗಳ ಫೆಡರೇಷನ್, ಬೆಂಗಳೂರು ಪಡೆಯ ಉದ್ಯೋಗಿಗಳ ಸಂಘದ ಸಹಯೋಗದೊಂದಿಗೆ ಮುಷ್ಕರ ಕೈಗೊಂಡಿದ್ದು, ಈ ಉದ್ಯಮವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದನ್ನು ವಿರೋಧಿಸಲಾಯಿತು.
ಈ ವೇಳೆ ಮಾತನಾಡಿದ ಎಐಡಿಇಎಫ್ ರಾಷ್ಟ್ರೀಯ ಉಪಾಧ್ಯಕ್ಷ ಎಂ.ಕೆ.ರವೀಂದ್ರನ್ ಪಿಳ್ಳೈ ಮಾತನಾಡಿ, ಖಾಸಗಿ ಉದ್ಯಮಿಗಳನ್ನು ಬಲಪಡಿಸುವ ಉದ್ದೇಶದಿಂದ ರಕ್ಷಣಾ ಪರಿಕರಗಳ ತಯಾರಿಕೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ವಹಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಸೈನಿಕರ ಅಧೀನದಲ್ಲಿರುವ ಉದ್ಯಮಗಳಿಗೆ ಮತ್ತು ಘಟಕಗಳಿಗೆ ಹಾಲು ಸರಬರಾಜು ಮಾಡುತ್ತಿದ್ದ ಸೇನಾ ಕೃಷಿ ವಲಯವನ್ನು ಮುಚ್ಚಲು ಹೊರಟಿದೆ. ಅದೇ ರೀತಿ ಎಂಟು ಸೇನಾ ಕಾರ್ಯಾಗಾರಗಳಿಗೂ ಕಡಿವಾಣ ಹಾಕಲು ಯತ್ನಿಸುತ್ತಿದೆ. ದೇಶದಲ್ಲಿ ಶಾಂತಿ ಸ್ಥಾಪನೆಗೆ ರಕ್ಷಣಾ ಉದ್ಯಮಗಳ ಸ್ವಾವಲಂಬನೆಗಾಗಿ ರಕ್ಷಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಕೌಶಲ್ಯಭರಿತ ನೌಕರರು ಶ್ರಮಿಸುತ್ತಿದ್ದಾರೆ. ಆದರೆ, ಇವರಿಗೆ ಪ್ರೋತ್ಸಹ ನೀಡಿ ಅಭಿವೃದ್ಧಿಪಡಿಸುವ ಬದಲಿಗೆ ಕಾರ್ಪೊರೇಟ್ ಉದ್ಯಮಗಳಿಗೆ ಬೆಂಬಲ ನೀಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯ ರಕ್ಷಣಾ ಪಡೆಯ ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ಜಾರಿಗೊಳಿಸಿದ್ದರೂ ಕೇಂದ್ರ ಸರ್ಕಾರ ಅದನ್ನು ನೀಡದೆ ಅವರ ಹಕ್ಕನ್ನು ಕಸಿದಿದೆ. ಈ ವಿರುದ್ಧದ ಹೋರಾಟದ ಅಂಗವಾಗಿ ನಡೆಸುತ್ತಿರುವ ಮುಷ್ಕರ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಆರ್ಎಲ್ಡಿಇ ನ ಆರ್.ಎನ್.ನಾಗರಾಜ್, ಎಡಿಇ ಅಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷ ಭಾಸ್ಕರ್ರಾವ್, ಕಾರ್ಯದರ್ಶಿ ಪ್ರಸನ್ನ ಮತ್ತಿತರರಿದ್ದರು.