
ಬೆಂಗಳೂರು, ಜ.23- ಸರ್ಕಾರದ ಪರವಾಗಿ ಉಪಮುಖ್ಯಮಂತ್ರಿ ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಕಂಪ್ಲಿ ಶಾಸಕ ಗಣೇಶ್ ಬಂಧಿಸುವುದು ಖಚಿತ ಎಂದು ಹೇಳುತ್ತಿದ್ದರಾದರೂ ಗಣೇಶ್ನ ಬಂಧನವಾದರೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುತ್ತದೆ. ಶಾಸಕರ ಸಂಖ್ಯೆಯಲ್ಲೂ ಕಡಿಮೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಬಂಧಿಸದಂತೆ ಕೆಲವು ಪ್ರಭಾವಿ ನಾಯಕರು ಒತ್ತಡ ಹೇರುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಎಫ್ಐಆರ್ಗೆ ಪ್ರತಿಯಾಗಿ ನಿರೀಕ್ಷಣಾ ಜಾಮೀನು ಕೋರಲು ಗಣೇಶ್ ಮುಂದಾಗಿದ್ದಾರೆ ಎನ್ನಲಾಗಿದ್ದು, ಗಣೇಶ್ಗೆ ಜಾಮೀನು ಸಿಗಬಾರದು ಎಂಬ ಉದ್ದೇಶದಿಂದ ಹಲ್ಲೆಗೊಳಗಾಗಿರುವ ಶಾಸಕ ಆನಂದ್ಸಿಂಗ್ ಆಸ್ಪತ್ರೆಯಿಂದ ಬಿಡುಗಡೆಯಾಗದೆ ಅಲ್ಲಿಯೇ ಉಳಿದಿದ್ದಾರೆ.
ಒಂದು ವೇಳೆ ಆನಂದ್ ಸಿಂಗ್ ಬಿಡುಗಡೆಯಾದರೆ ನಿರೀಕ್ಷಣಾ ಜಾಮೀನು ಪಡೆಯಲು ಸುಲಭವಾಗುತ್ತದೆ ಎಂದು ಹೇಳಲಾಗಿದೆ. ಗಣೇಶ್ ಜೈಲಿಗೆ ಹೋಗುವುದು ತಪ್ಪುತ್ತದೆ. ಮುಂದಿನ ದಿನಗಳಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ. ಹೀಗಾಗಿ ಗಣೇಶ್ನನ್ನು ರಕ್ಷಿಸಲು ಒಂದು ಬಣ ಪ್ರಯತ್ನಿಸುತ್ತಿದ್ದರೆ. ಆತನನ್ನು ಜೈಲಿಗೆ ಕಳುಹಿಸಿ ನಾಗೇಂದ್ರ ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ರಮೇಶ್ ಜಾರಕಿಹೊಳಿ ಅವರಿಗೆ ಪಾಠ ಕಲಿಸಬಹುದು ಎಂದು ಮತ್ತೊಂದು ಬಣ ಹಠಕ್ಕೆ ಬಿದ್ದಿದೆ.
ಒಂದು ವೇಳೆ ಗಣೇಶ್ನ ಬಂಧನವಾದರೆ ಕಾಂಗ್ರೆಸ್ನ ಶಾಸಕರು ಜೈಲಿಗೆ ಹೋಗಿ ಬಂದರು ಎಂಬ ಅಪಕೀರ್ತಿ ಎದುರಾಗಲಿದ್ದು, ಈವರೆಗೂ ಬಿಜೆಪಿಯವರನ್ನ ಕಾಂಗ್ರೆಸ್ ಶಾಸಕರು ಜೈಲಿಗೆ ಹೋದವರು ಎನ್ನುತ್ತಿದ್ದರು. ಮುಂದೆ ಬಿಜೆಪಿಯವರು ಕಾಂಗ್ರೆಸ್ನವರೂ ಜೈಲಿಗೆ ಹೋಗಿದ್ದಾರೆ ಎಂದು ಟೀಕೆ ಮಾಡುವ ಸಾಧ್ಯತೆ ಇರುವುದರಿಂದ ಗಣೇಶ್ ಅವರನ್ನು ಜಾಮೀನಿನ ಮೇಲೆ ಹೊರಗೆ ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.