ಬೆಂಗಳೂರು,ಜ.23-ಬಜೆಟ್ ಅಧಿವೇಶನದೊಳಗೆ ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಅತೃಪ್ತ ಶಾಸಕರನ್ನು ಸೆಳೆಯುವ ಆಪರೇಷನ್ ಕಮಲಕ್ಕೆ ಮತ್ತೆ ಚಾಲನೆ ಕೊಟ್ಟಿದೆ.
ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದರಿಂದ ರಾಜ್ಯ ರಾಜಕಾರಣದ ಬೆಳವಣಿಗೆಗಳಿಗೆ ಕಡಿವಾಣ ಬಿದ್ದಿತ್ತು.
ಇದರ ನಡುವೆ ರಾಮನಗರ ಜಿಲ್ಲೆ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಜೆ.ಎನ್.ಗಣೇಶ್ ನಡೆಸಿದ ಹಲ್ಲೆಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಎಲ್ಲ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು.
ಇದೀಗ ಪುನಃ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಹೇಗಾದರೂ ಸರಿಯೇ ಸಮ್ಮಿಶ್ರ ಸರ್ಕಾರವನ್ನು ಬಜೆಟ್ ಅಧಿವೇಶನದೊಳಗೆ ಅಸ್ಥಿರಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ತನ್ನ ಪ್ರಯತ್ನವನ್ನು ಬಿಜೆಪಿ ಮುಂದುವರೆಸಿದೆ.
ಸದ್ಯಕ್ಕೆ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಭಿನ್ನಮತೀಯ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಡಾ.ಉಮೇಶ್ ಜಾಧವ್, ಬಿ.ನಾಗೇಂದ್ರ ಅವರ ಜೊತೆ ಕಾಂಗ್ರೆಸ್ನ ಇನ್ನಷ್ಟು ಭಿನ್ನಮತೀಯರು ಸೇರಿಕೊಳ್ಳುವ ಸಾಧ್ಯತೆ ಇದೆ.
ಒಲ್ಲದ ಮನಸ್ಸಿನಿಂದಲೇ ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗಿದ್ದ ಶಾಸಕರಾದ ಪ್ರತಾಪ್ ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್ ಸೇರಿದಂತೆ ಮತ್ತಿತರರು ಯಾವುದೇ ಸಂದರ್ಭದಲ್ಲಿ ತಮ್ಮ ಮಾತೃ ಪಕ್ಷಕ್ಕೆ ಕೈ ಕೊಡುವ ಸಾಧ್ಯತೆ ಇದೆ.
ಅವಿಶ್ವಾಸ ನಿರ್ಣಯ :
ಶಾಸಕರು ರಾಜೀನಾಮೆ ನೀಡಿದರೆ ಪುನಃ ಉಪಚುನಾವಣೆ ಎದುರಾಗುತ್ತದೆ. ಈಗಿನ ಲೆಕ್ಕಾಚಾರದಲ್ಲಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಬೇಕೆಂದರೆ ಕನಿಷ್ಠ ಪಕ್ಷ 12ರಿಂದ 15 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಈ ಉಸಾಬರಿಯೇ ಬೇಡ ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ನಾಯಕರು ಬಜೆಟ್ ಅಧಿವೇಶನದಲ್ಲಿ ದೋಸ್ತಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ.
ಇಬ್ಬರು ಪಕ್ಷೇತರ ಶಾಸಕರು ಬೆಂಬಲವನ್ನು ಹಿಂಪಡೆದಿರುವುದರಿಂದ ಸರ್ಕಾರಕ್ಕೆ ಈಗ 118 ಸದಸ್ಯರ ಬೆಂಬಲವಿದೆ. ಕರ್ನಾಟಕ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 224, ಓರ್ವ ಆಂಗ್ಲೋ ಇಂಡಿಯನ್ ಸದಸ್ಯರ ಇದ್ದರೂ ಅವರಿಗೆ ಮತದಾನದ ಅವಕಾಶ ಇರುವುದಿಲ್ಲ. ಅಗತ್ಯ ಸಂದರ್ಭದಲ್ಲಿ ಮಾತ್ರ ವಿಧಾನಸಭೆಯ ಸ್ಪೀಕರ್ ಮತ ಚಲಾಯಿಸುವ ಅಧಿಕಾರವನ್ನು ಹೊಂದಿರುತ್ತಾರೆ.
104 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಇಬ್ಬರು ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಬೆಂಬಲ ನೀಡಿರುವುದರಿಂದ ಸಂಖ್ಯೆ 106ಕ್ಕೆ ಏರಿದೆ.
ಕಾಂಗ್ರೆಸ್-ಜೆಡಿಎಸ್ನ ಭಿನ್ನಮತೀಯರನ್ನುಸೆಳೆದು ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮತ ಹಾಕುವಂತೆ ತಂತ್ರ ರೂಪಿಸಲಾಗಿದೆ. ಒಂದು ವೇಳೆ ಶಾಸಕರಿಗೆ ವಿಪ್ ಜಾರಿ ಮಾಡಿ ನಂತರ ಅನರ್ಹತೆಯ ಸಂಕಷ್ಟ ಎದುರಾದರೆ ಕಾನೂನು ಹೋರಾಟ ಹಾಗೂ ಉಪಚುನಾವಣೆಯಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.