ಜಕಾರ್ತ, ಜ.22-ವರ್ಷಾಂತ್ಯದಲ್ಲಿ ಜ್ವಾಲಾಮುಖಿ, ಭೂಕಂಪ ಮತ್ತು ಸುನಾಮಿ ರೌದ್ರಾವತಾರದಿಂದ 500ಕ್ಕೂ ಹೆಚ್ಚು ಮಂದಿ ಬಲಿಯಾದ ದ್ವೀಪರಾಷ್ಟ್ರ ಇಂಡೋನೆಷ್ಯಾದಲ್ಲಿ ಇಂದು ಮುಂಜಾನೆ ಮತ್ತೆ ಭೂಕಂಪವಾಗಿದ್ದು, ಜನರು ಭಯಭೀತಿಯ ವಾತಾವರಣ ಸೃಷ್ಟಿಯಾಗಿದೆ.
ಇಂಡೋನೆಷ್ಯಾದ ಸುಂಬಾ ಕರಾವಳಿ ಪ್ರದೇಶದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 6ರಷ್ಟು ತೀವ್ರತೆ ಹೊಂದಿತ್ತು.
ವೈನ್‍ಗಪು ನಗರದಿಂದ 150 ಕಿ.ಮೀ.ದೂರದಲ್ಲಿರುವ ಸುಂಬಾ ದ್ವೀಪದಲ್ಲಿ ಸಮುದ್ರದ 31 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ. ಈ ವೇಳೆ ಕಡಲಿನಲ್ಲಿ ಕೊಂಚ ಪ್ರಕ್ಷುಬ್ಧತೆ ಕಂಡು ಬಂದಿತ್ತಾದರೂ ಸುನಾಮಿ ಎಚ್ಚರಿಕೆ ನೀಡಿಲ್ಲ.
ಈ ಭೂಕಂಪದ ನಂತರ ಅದೇ ಸ್ಥಳದಲ್ಲಿ 5.2 ತೀವ್ರತೆಯ ಮತ್ತೊಂದು ದುರ್ಬಲ ಭೂಕಂಪ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ ವರದಿಯಾಗಿಲ್ಲ
.