
ತುಮಕೂರು, ಜ.22-ಪರಮಾತ್ಮ ಸ್ವರೂಪಿಯಾಗಿದ್ದ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಲಿಂಗೈಕ್ಯರಾದ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ ಅವರು, ನಾಡಿನ ಹಿರಿಯಜ್ಜ ಅವರನ್ನು ಕಳೆದುಕೊಂಡಿದ್ದೇವೆ. ದೇಶಕ್ಕೆ ಅವರಿಂದ ಗೌರವ ಸಿಕ್ಕಿದೆ. ಸುದೀರ್ಘ ಕಾಲ ಧಾರ್ಮಿಕ, ಸಾಮಾಜಿಕ ಸೇವೆ ಮಾಡಿದ ಮಹಾತ್ಮರು ಮತ್ತೊಬ್ಬರಿಲ್ಲ. ಕಿರಿಯ ಸ್ವಾಮೀಜಿಗಳು ಸಿದ್ದಗಂಗಾ ಮಠದ ಹಿರಿಯ ಶ್ರೀಗಳ ಜ್ಞಾನ ಗಂಗೆಯನ್ನು ಮುಂದುವರೆಸಿಕೊಂಡು ಹೋಗುವ ಭರವಸೆ ಇದೆ ಎಂದು ಹೇಳಿದರು.
ನಿರ್ದೇಶಕ ಸಾಯಿ ಪ್ರಕಾಶ್ ಮಾತನಾಡಿ, ಜೀವನದಲ್ಲಿ ಸಿದ್ದಗಂಗಾ ಶ್ರೀಗಳಂತಹ ಮಹನೀಯರನ್ನು ನೋಡುವುದೇ ಪುಣ್ಯ.ಇಂತಹ ಗುರುಗಳನ್ನು ನಾವು ಪಡೆದಿದ್ದೇವೆ ಎಂಬುದೇ ಸೌಭಾಗ್ಯ ಎಂದು ಹೇಳಿದರು.
ಶ್ರೀಗಳ ಸೇವೆಯನ್ನು ಯಾರೂ ಮರೆಯುವಂತಿಲ್ಲ. ಶ್ರೀಮಠದಲ್ಲಿ ಶಿಕ್ಷಣ ಪಡೆದವರು ವಿಶ್ವದಾದ್ಯಂತ ಇದ್ದಾರೆ ಎಂದು ನುಡಿನಮನ ಸಲ್ಲಿಸಿದರು.