ಬೆಂಗಳೂರು: ನನ್ನ ಮತ್ತು ಆನಂದ್ ಸಿಂಗ್ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಆನಂದ್ ಸಿಂಗ್ ನನಗೆ ಅಣ್ಣನ ಸಮಾನ. ರೆಸಾರ್ಟ್ನಲ್ಲಿ ನಾನು ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು ಎಂದು ಕಂಪ್ಲಿ ಶಾಸಕ ಜೆಎನ್ ಗಣೇಶ್ ಇಂದು ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ರಾತ್ರಿ ರೆಸಾರ್ಟ್ನ ಹೊಸಪೇಟೆ ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಶಾಸಕರ ಹೊಡೆದಾಟ ನಡೆದಿತ್ತು. ಆನಂದ್ ಸಿಂಗ್ ಮೇಲೆ ಗಣೇಶ್ ಹಲ್ಲೆ ನಡೆಸಿದ್ದರ ಪರಿಣಾಮ ಹೊಸಪೇಟೆ ಶಾಸಕರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇದು ಸುಳ್ಳು. ಇಬ್ಬರು ನಾಯಕರು ಮಾಧ್ಯಮದ ಎದುರು ಬಂದು ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಆದರೆ, ಕೆಲವು ನಾಯಕರು ಗಲಾಟೆ ಆಗಿರುವ ಬಗ್ಗೆ ತಿಳಿಸಿದ್ದರು.
ಈ ಕುರಿತು ಇಂದು ಈಗಲ್ಟನ್ ರೆಸಾರ್ಟ್ನಲ್ಲಿ ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ ಗಣೇಶ್, ನಾನು ಆನಂದ್ ಸಿಂಗ್ಗೆ ಬಾಟಲಿಯಲ್ಲಿ ಹೊಡೆದಿದ್ದೇನೆ ಎಂಬುದು ಸುಳ್ಳು. ಗನ್ ಮ್ಯಾನ್ ಮೇಲೆ ಕೂಡ ನಾನು ಹಲ್ಲೆ ನಡೆಸಿಲ್ಲ. ಭೀಮಾ ನಾಯ್ಕ್ ಹಾಗೂ ಆನಂದ್ ಸಿಂಗ್ ನಡುವೆ ಹೊಂದಾಣಿಕೆ ಮಾಡುವಾಗ ವಾಗ್ವಾದ ನಡೆಯಿತು. ಆದರೆ ಹೊಡೆದಾಟ ನಡೆದಿಲ್ಲ ಎಂದರು.
ಆನಂದ್ ಸಿಂಗ್ ಅವರಿಗೆ ಮೊದಲೇ ಆರೋಗ್ಯ ಸರಿಯಿರಲಿಲ್ಲ. ಅವರು ಬಿದ್ದ ಪರಿಣಾಮ ಹೀಗೆ ಆಗಿದೆ. ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು ನಿಜ. ಆದರೆ ಹಲ್ಲೆ ನಡೆದಿಲ್ಲ. ನಾನು ಇವರ ಮಧ್ಯೆ ಮಧ್ಯಸ್ಥಿಕೆ ನಡೆಸಿದ್ದೆ ಹೊರತು ಹಲ್ಲೆಗೆ ಮುಂದಾಗಿಲ್ಲ.
ಈ ಘಟನೆಯಿಂದ ಆನಂದ್ ಸಿಂಗ್ ಅವರ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಹೈಕಮಾಂಡ್ಗೆ ಮುಜುಗರ ಉಂಟು ಮಾಡಲು ಇಷ್ಟಪಡುವುದಿಲ್ಲ. ಹಾಗಾಗಿ ಮಾಧ್ಯಮದ ಮುಂದೆ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದರು.
ಇತ್ತ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಘಟನೆ ಕುರಿತು ವಿಚಾರಣೆ ನಡೆಸಲು ಬಿಡದಿ ಪೊಲೀಸರು ಆಸ್ಪತ್ರೆಗೆ ಆಗಮಿಸಲಿದ್ಧಾರೆ. ಸಂಸದ ಡಿಕೆ ಸುರೇಶ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ.