ವಿದ್ಯಾರ್ಥಿಗಳು ಛಲ ಮತ್ತು ದೂರ ದೃಷ್ಟಿಯನ್ನು ಮೈಗೂಡಿಸಿಕೊಳ್ಳಬೇಕು : ಡಿ.ಎಚ್.ಶಂಕರಮೂರ್ತಿ

ಬೆಂಗಳೂರು, ಜ.20- ಧ್ಯೇಯೋದ್ದೇಶ ಮತ್ತು ಸಫಲತೆಗೆ ಪಡುವ ಪರಿಶ್ರಮವೇ ವಿದ್ಯಾರ್ಥಿಗಳನ್ನು ಯಶಸ್ಸಿನ ಹಾದಿಗೆ ತಲುಪಿಸುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಇಂದಿಲ್ಲಿ ಅಭಿಪ್ರಾಯಪಟ್ಟರು.

ನಗರದ ಶೇಷಾದ್ರಿ ರಸ್ತೆಯ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರಸಕ್ತ ಸಾಲಿನ ಪ್ರತಿಭಾನ್ವಿತ 125 ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದಲ್ಲಿ ಛಲವಿದ್ದರೆ ಏನಾದರೂ ಸಾಧಿಸಬಹುದು. ಹಾಗಾಗಿ ವಿದ್ಯಾರ್ಥಿಗಳು ಛಲ ಮತ್ತು ದೂರದೃಷ್ಟಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಿಕ್ಷಣದ ಸೌಲಭ್ಯ ಬಡ ವಿದ್ಯಾರ್ಥಿಗಳಿಗೆ ತಲುಪಿದಾಗ ಮಾತ್ರ ಅದರ ಉದ್ದೇಶ ಸಾರ್ಥಕತೆ ಪಡೆಯುತ್ತದೆ.ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಯೋಜನೆ ಉತ್ತಮವಾಗಿದೆ.ಇದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳನ್ನು ಅರಿಯಲು ಮುಂದಾಗಿ ಎಂದು ಸಲಹೆ ಮಾಡಿದರು.

ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್ ಮಾತನಾಡಿ, ಇದೇ ಮೊದಲ ಬಾರಿಗೆ ಮಹಾಸಭಾದಿಂದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆಯನ್ನು ಜಾರಿಗೆ ತರಲಾಗಿದೆ.110 ವರ್ಷಗಳಿಂದ ಆರ್ಯವೈಶ್ಯ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾಗಿ ಸಮುದಾಯದ ಅಭಿವೃದ್ಧಿಗೂ ಶ್ರಮಿಸುತ್ತಿದೆ ಎಂದು ನುಡಿದರು.

ಸಮುದಾಯದ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ವಿದ್ಯಾನಿಧಿ, ವಿದ್ಯಾಮಿತ್ರ ಯೋಜನೆ ಆರಂಭಿಸಿ ಆ ಮೂಲಕ ವಿದ್ಯಾರ್ಥಿ ವೇತನ ಮತ್ತು ಗರಿಷ್ಠ 1 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ ಎಂದು ವಿವರಿಸಿದರು.

ಸಂಸದ ಪಿ.ಸಿ.ಮೋಹನ್, ದಕ್ಷಿಣ ಭಾರತ ರಾಜ್ಯಗಳ ಆರ್ಯವೈಶ್ಯ ಸಂಘದ ಅಧ್ಯಕ್ಷ ನಂದಕುಮಾರ್ ಗಾದೇವಾರ್, ಪೆನುಗೊಂಡ ಸುಬ್ಬರಾಯ, ರಾಮದಾಸ್, ಅಮರವಾಡಿ, ಲಕ್ಷ್ಮಿನಾರಾಯಣ್ ಸೇರಿದಂತೆ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ