ಬೆಂಗಳೂರು,ಜ.20- ಇಂದಿನ ತಲೆಮಾರಿನ ಮಕ್ಕಳಲ್ಲಿ ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಬಿತ್ತುವುದು ಬಹಳ ಅವಶ್ಯಕ ಎಂದು ಎಎಸ್ಬಿ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಭಗೀರಥ್ ಅಭಿಪ್ರಾಯಪಟ್ಟರು.
ನಗರದ ಲಾಲ್ಭಾಗ್ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಮಹಾತ್ಮ ಗಾಂಧೀಜಿಯವರ ಆತ್ಮಚರಿತ್ರೆಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದರು.
ಸೇವೆ ಮತ್ತು ಸಹಬಾಳ್ವೆಯ ಪಾಠ ಬೋಧಿಸಿದ ಬಾಪೂಜಿಗೆ ಬಾಪು ಕುಟೀರದ ಮೂಲಕ ಪುಷ್ಪ ನಮನವನ್ನು ಎಎಸ್ಬಿ ಸಲ್ಲಿಸುತ್ತಿದೆ.ಬಾಪು ಕುಟೀರದ ಪ್ರಾಯೋಜಕತ್ವ ವಹಿಸಿಕೊಳ್ಳುವುದು ನಮ್ಮ ಸೌಭಾಗ್ಯವೇ ಸರಿ.ಇದೇ ರೀತಿ ಇಂದಿನ ಮಕ್ಕಳಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳ ಬಗ್ಗೆ ತಿಳುವಳಿಕೆ ಮೂಡಿಸುವುದು ನಮ್ಮ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಆತ್ಮಚರಿತ್ರೆಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸುತ್ತಿದ್ದೇವೆ. ಈ ಮಕ್ಕಳು ಗಾಂಧೀಜಿಯವರ ಜೀವನದ ಬಗ್ಗೆ ತಿಳಿದುಕೊಳ್ಳುವ ಮೂಲಕ ಆದರ್ಶ ವ್ಯಕ್ತಿಗಳಾಗಿ ಬೆಳೆಯಲಿ ಎನ್ನುವ ಆಶಯ ನಮ್ಮದು ಎಂದರು.
ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ವರ್ಷಾಚರಣೆಯ ಸಂದರ್ಭದಲ್ಲಿ ಮುಂದಿನ ದಿನಗಳಲ್ಲೂ ಶಾಲಾ ವಿದ್ಯಾರ್ಥಿಗಳಲ್ಲಿ ಬಾಪೂಜಿಯವರ ಸಂದೇಶಗಳನ್ನು ತಲುಪಿಸುವ ಕಾರ್ಯಕ್ಕೂ ಎಎಸ್ಬಿ ಮುಂದಾಗಲಿದೆ ಎಂದರು.