ಬೆಂಗಳೂರು, ಜ.18-ಇಂದು ನಡೆಯಲಿರುವ ಕಾಂಗ್ರೆಸ್ನ ಶಾಸಕಾಂಗ ಪಕ್ಷದ ಮಹತ್ವದ ಸಭೆಯಲ್ಲಿ ಅತೃಪ್ತರು ಕೈಕೊಟ್ಟರೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಕಾಂಗ್ರೆಸ್ನ ಹಿರಿಯ ಮುಖಂಡರು ಇಂದು ರಹಸ್ಯ ಸಭೆ ನಡೆಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ಮುಖಂಡರು ಇಂದು ಸಭೆ ಸೇರಿ ಮಹತ್ವದ ಚರ್ಚೆ ನಡೆಸಿದರು.
ಇಂದು ನಡೆಯಲಿರುವ ವಿಶೇಷ ಶಾಸಕಾಂಗ ಪಕ್ಷದ ಸಭೆ ಕಾಂಗ್ರೆಸ್ಗೆ ಮಹತ್ವದ್ದಾಗಿದ್ದು, ಅತೃಪ್ತರೇನಾದರೂ ಭಾಗವಹಿಸದೆ ಕೈಕೊಟ್ಟರೆ ಮುಂದೆ ಯಾವ ರೀತಿ ಕ್ರಮಕೈಗೊಂಡರೆ ಆಗಬಹುದಾದ ಪರಿಣಾಮಗಳು ಮತ್ತು ಅಡ್ಡ ಪರಿಣಾಮಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಅತೃಪ್ತ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಅವರಿಗೆ ನೋಟಿಸ್ ನೀಡಿ ವಿವರಣೆ ಕೋರಲು ನಿರ್ಧರಿಸಲಾಗಿದೆ. ಈ ರೀತಿ ಮಾಡುವುದರ ಮೂಲಕ ಅತೃಪ್ತರನ್ನು ಕಟ್ಟಿ ಹಾಕಲು ಕಾಂಗ್ರೆಸ್ ಪಕ್ಷದ ಮುಖಂಡರು ಮುಂದಾಗಿದ್ದಾರೆ.
ಹೀಗಾಗಿ ಸಭೆಗೆ ಎಲ್ಲಾ ಶಾಸಕರು ಬರುತ್ತಾರೆ ಎಂದು ನಿರೀಕ್ಷಿಸಿದ್ದಾರೆ. ಈ ಎಚ್ಚರಿಕೆ ನಡುವೆಯೂ ಗೈರು ಹಾಜರಾದರೆ ಅವರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ನಾಯಕರು ಎಚ್ಚರಿಕೆ ನೀಡಿದ್ದಾರೆ.
ಯಾವುದನ್ನೂ ಬಹಿರಂಗಪಡಿಸದೆ ರಹಸ್ಯವಾಗಿಯೇ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಹಾಜರಾಗದೆ ಇದ್ದರೆ ಅಂಥವರ ವಿರುದ್ಧ ಕಾನೂನಾತ್ಮಕವಾಗಿ ಯಾವ ಕ್ರಮ ಕೈಗೊಳ್ಳಬೇಕು, ಬೇರೆ ಪಕ್ಷಕ್ಕೆ ಜಿಗಿಯದಂತೆ ಯಾವ ರೀತಿ ನಿಯಂತ್ರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.
ಒಟ್ಟಾರೆ ಇಂದಿನ ಶಾಸಕಾಂಗ ಪಕ್ಷದ ಸಭೆ ತೀವ್ರ ಕುತೂಹಲ ಮೂಡಿಸಿದೆ.