ಬೆಂಗಳೂರು,ಜ.18-ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಇಂದು ಕರೆದಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೂ, ಬಿಜೆಪಿಗೂ ಎತ್ತಣಿಂದೆತ್ತ ಸಂಬಂಧ. ನಾವು 104 ಶಾಸಕರು ಒಗ್ಗಟಾಗಿ ಲೋಕಸಭೆ ಚುನಾವಣೆಯನ್ನು ಎದುರಿಸಲು ನಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಎಲ್ಲಿಗೆ ಹೋಗಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಬೇರೆ ಪಕ್ಷಗಳ ಆಂತರಿಕ ಚಟುವಟಿಕೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಪಕ್ಷದ ಶಾಸಕರು ಹೊರಹೋಗಿದ್ದರೆ ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ.ಅದಕ್ಕೂ ನಮಗೂ ಏನೂ ಸಂಬಂಧ ಎಂದು ಪ್ರಶ್ನೆ ಮಾಡಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಕಾರ್ಯತಂತ್ರಗಳನ್ನು ರೂಪಿಸಿದ್ದೇವೆ. ಪ್ರಸ್ತುತ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಗೊಂದಲಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅವರವರ ಹುಳುಕುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ಹರಿಯಾಣದ ಗುರುಗ್ರಾಮದಲ್ಲಿರುವ ಶಾಸಕರನ್ನು ಬೇರೆ ರೆಸಾರ್ಟ್ಗೆ ಕರೆದೊಯ್ಯಲಾಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡ ಯಡಿಯೂರಪ್ಪ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಲ್ಲ ಶಾಸಕರು ನಾಳೆ ಬೆಂಗಳೂರಿಗೆ ವಾಪಸ್ಸಾಗಲಾಗಲಿದ್ದಾರೆ ಎಂದು ಹೇಳಿದರು.