ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ವಿರೋದ ವ್ಯಕ್ತಪಡಿಸಿದ ಬ್ಯಾಂಕ್ ಸಂಘಟನೆಗಳು

ಬೆಂಗಳೂರು,ಜ.18- ವಿಜಯಾ ಬ್ಯಾಂಕ್ ದೇನಾ ಹಾಗೂ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಗೆ ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕನ್ಫೆಡರೇಷನ್ ಹಾಗೂ ಆಲ್ ಇಂಡಿಯಾ ವಿಜಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿವೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎರಡು ಸಂಘಟನೆಗಳ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಕೆ.ಶ್ರೀನಿವಾಸ್ ಹಾಗೂ ಕೆ.ಪ್ರಕಾಶ್ ರಾವ್ ಅವರು ಕೇಂದ್ರ ಸರ್ಕಾರದ ಹಣಕಾಸು ಮಂತ್ರಿಗಳು ಬ್ಯಾಂಕ್‍ಗಳ ವಿಲೀನ ಸಂಬಂಧ ಏಕಪಕ್ಷೀಯ ನಿರ್ಧಾರ ಪ್ರಕಟಿಸಿದ್ದಾರೆ.ಈ ನಿರ್ಧಾರ ಬ್ಯಾಂಕಿನ ಶೇರುದಾರರು ಹಾಗೂ ಗ್ರಾಹಕರ ಹಿತಕ್ಕೆ ವಿರುದ್ಧವಾಗಿದೆ. ಈ ವಿಲೀನದ ನಿರ್ಧಾರ ಪೂರ್ವಾಪರರಹಿತ ಹಾಗೂ ಬ್ಯಾಂಕಿನ ವಹಿವಾಟಿಗೆ ಆರ್ಥಿಕ ದೃಢತೆ ಹಾಗೂ ಉದ್ಯೋಗಿಗಳ ಆತ್ಮಸಾಕ್ಷಿಗೆ ಪೆಟ್ಟು ಕೊಡುವ ನಿರ್ಧಾರವಾಗಿದೆ ಎಂದು ಆರೋಪಿಸಿದರು.

ಸರ್ಕಾರವು ತನ್ನದೇ ಒಡೆತನದ ಬ್ಯಾಂಕುಗಳ ವಿಲೀನಕ್ಕೆ ಒತ್ತು ಕೊಡುತ್ತಿದೆ.ದೊಡ್ಡ ಬ್ಯಾಂಕುಗಳಿಂದ ಹೆಚ್ಚಿನ ಭದ್ರತೆ ಹಾಗೂ ಶಕ್ತಿ ಬರುತ್ತದೆ ಎನ್ನುವುದು ಸರ್ಕಾರದ ನಂಬಿಕೆ. ಆದರೆ ಅಮೆರಿಕಾದ ದೊಡ್ಡ ಬ್ಯಾಂಕ್ ಆದ ಲೇಮನ್ ಬ್ರದಸ್ರ್ನ ಕುಸಿತ ಈ ನಂಬಿಕೆಯನ್ನು ಹುಸಿಗೊಳಿಸಿದೆ.
2008 ರಲ್ಲಿ ಜಾಗತಿಕ, ಆರ್ಥಿಕ ಕುಸಿತದಿಂದ ಭಾರತ ಪಾರಾಗಲು ಚಿಕ್ಕ ಬ್ಯಾಂಕುಗಳೇ ಕಾರಣ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.ಎಷ್ಟೋ ದೊಡ್ಡ ಬ್ಯಾಂಕುಗಳಿಗಿಂತ ವಿಜಯಾ ಬ್ಯಾಂಕ್ ಅನೇಕ ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ವಿಲೀನದ ನಂತರ ಈಗಿರುವ ಜ್ವಲಂತ ಸಮಸ್ಯೆಗಳು ಪರಿಹಾರವಾಗಿಬಿಡುತ್ತಾ? ಅದಕ್ಕೇನು ಮಂತ್ರದಂಡವಿದೆಯಾ ಎಂದು ಪ್ರಶ್ನಿಸಿದರು.

ಬ್ಯಾಂಕುಗಳ ವಿಲೀನದಿಂದ ಸಾವಿರಾರು ಶಾಖೆಗಳು ಹಾಗೂ ಕಛೇರಿ ಮುಚ್ಚಲಿವೆ. ಜೊತೆಜೊತೆಗೆ 10,000 ಕ್ಕಿಂತ ಹೆಚ್ಚು ನೌಕರರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದೀಗ ಈ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಮೊದಲ ಹೆಜ್ಜೆಯಾಗಿದ್ದು ಮುಂದಿನ ದಿನಗಳಲ್ಲಿ ನಮ್ಮ ದೇಶದ ಇನ್ನಿತರ ಬ್ಯಾಂಕುಗಳಾದ ಆಂದ್ರ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್ , ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಿಂಡಿಕೇಟ್ ಬ್ಯಾಂಕ್, ಕಾಪರ್?ರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್ ಸಹ ಇದೇ ಹಾದಿಯಲ್ಲಿ ಮುನ್ನಡೆಯಲಿವೆ.

ಬೇರೆ ಬೇರೆ ಸಂಸ್ಕೃತಿ ವಿವಿಧ ಆಡಳಿತಾತ್ಮಕ ಹಾಗೂ ಭೌಗೋಳಿಕ ಭಿನ್ನತೆಯಿರುವ ಬ್ಯಾಂಕುಗಳ ವಿಲೀನ ಬಹಳ ಕಷ್ಟ ಎಂದ ಅವರುಗಳು ವಿಲೀನ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿರುವುದು ನೌಕರರಿಗೆ ಸಿಗಬಹುದಾದಂತಹ ಭತ್ಯೆ ಮತ್ತು ಇತರೆ ಸೌಲಭ್ಯಗಳ ದೃಷ್ಟಿಯಿಂದಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ