
ಶ್ರೀನಗರ: ಯುವ ಕ್ರಾಂತಿ ಯಾತ್ರೆಗೆ ಸಜ್ಜಾಗಿರುವ ಕಾಂಗ್ರೆಸ್ ಯುವ ಘಟಕ, ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ಲಾಲ್ ಚೌಕ್ನಲ್ಲಿ ರಾಷ್ಟ್ರ ಧ್ವಜ ಹಾರಿಸಲು ಯೋಜಿಸಿದೆ.
ಕೇಂದ್ರ ಸರ್ಕಾರದ ವೈಫಲ್ಯದ ಬಗ್ಗೆ ದೇಶದ ಗಮನ ಸೆಳೆಯಲು ಭಾರತೀಯ ಯುವ ಕಾಂಗ್ರೆಸ್ ಘಟಕ ಯುವ ಕ್ರಾಂತಿಯನ್ನು ಆಯೋಜಿಸಿದೆ. ಭಾರತೀಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೇಶವ್ ಚಂದ್ರ ಯಾದವ್ ಹಾಗೂ ಉಪಾಧ್ಯಕ್ಷ ಶ್ರೀನಿವಾಸ್ ಬಿ.ವಿ. ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಡಿಸೆಂಬರ್ 16ರಂದು ಯುವ ಕ್ರಾಂತಿ ಯಾತ್ರೆ ಆರಂಭವಾಗಿದೆ. ಜನವರಿ 30ಕ್ಕೆ ನವದೆಹಲಿ ತಲುಪಲಿದ್ದು, ಬೃಹತ್ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲಾಗಿದೆ.
ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸುವ ಕುರಿತು ಐವೈಸಿ ವಕ್ತಾರ ಅಮ್ರೀಶ್ ರಂಜನ್ ಪಾಂಡೆ ಮಾಹಿತಿ ನೀಡಿದ್ದಾರೆ. ನಾವು ಪಾಕಿಸ್ತಾನದಲ್ಲಿ ಬಿರಿಯಾನಿ ಸೇವಿಸಲು ಹೋಗುತ್ತಿಲ್ಲ. ಚೈತನ್ಯಯುತ ಯುವ ಸಮುದಾಯದೊಂದಿಗೆ ರಾಷ್ಟ್ರ ವಿರೋಧಿ ಶಕ್ತಿಗಳನ್ನು ತೋರಿಸಲಿದ್ದೇವೆ’ ಎಂದು ಪಾಂಡೆ ಹೇಳಿದ್ದಾರೆ.
ನಮ್ಮ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಿದೆ. ಈಗಾಗಲೇ ಸುಮಾರು 9 ಸಾವಿರ ಕಿ.ಮೀ ಸಾಗಿದ್ದೇವೆ. ಸದ್ಯ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸಂಚರಿಸಿದ್ದು, ಪಂಜಾಬ್ ಮೂಲಕ ಜಮ್ಮು ಕಾಶ್ಮೀರ ತಲುಪಲಿದ್ದೇವೆ’ ಎಂದರು.
‘ಬಾವುಟ ಹಾರಿಸುವ ಮೂಲಕ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸಾರಲಿದ್ದೇವೆ. ಕೆಲವು ರಾಜಕೀಯ ಪಕ್ಷಗಳ ನಾಯಕರು ಕಾಶ್ಮೀರ ಯುವಕರ ಕುರಿತು ಮಾಡುತ್ತಿರುವ ಅಪಪ್ರಚಾರದ ಬದಲಾಗಿ, ಇಲ್ಲಿನ ಯುವ ಸಮುದಾಯ ಹೊಂದಿರುವ ರಾಷ್ಟ್ರೀಯ ಭಾವನೆಯನ್ನು ಬಿಂಬಿಸಲಿದ್ದೇವೆ’ ಎಂದು ತಿಳಿಸಿದರು.
Yuva Kranti Yatra,Indian Youth Congress