ಬೆಂಗಳೂರು, ಜ.16-ರಾಜ್ಯ ಕಾಂಗ್ರೇಸ್ ಉಸತ್ಉವಾರಿ ನಾಯಕ್ ಕೆ.ಸಿ.ವೇಣುಗೋಪಾಲ್ ಇಂದು ಬೆಳಗ್ಗೆಯಿಂದ ಶಾಸಕರ ಜತೆ ನಿರಂತರವಾಗಿ ಸಂಪರ್ಕ ಸಾಧಿಸಿದ ನಂತರ ಅವರು ಮಧ್ಯಾಹ್ನದ ವೇಳೆಗೆ ಸುದ್ದಿಗಾರರ ಜತೆ ಮಾತನಾಡಿದರು.
ಎಲ್ಲವೂ ಸರಿಹೋಗಿದೆ. ಎಲ್ಲಾ ಶಾಸಕರು ಕಾಂಗ್ರೆಸ್ ಜತೆ ಇದ್ದಾರೆ.ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಕಪೋಲಕಲ್ಪಿತವಾಗಿವೆ. ಅದರಲ್ಲಿ ಒಂದೂ ಸತ್ಯಾಂಶವಿಲ್ಲ ಎಂದು ಅವರು ಕಡಾಖಂಡಿತವಾಗಿ ಹೇಳಿದರು.
ಕೆಲವು ಶಾಸಕರು ಮುಂಬೈನಲ್ಲಿರುವ ಬಗ್ಗೆ ಪ್ರಶ್ನಿಸಿದಾಗ ಅದು ನಿನ್ನೆಯ ವಿಚಾರ.ಇಂದು ಅಲ್ಲಿ ಯಾರಿದ್ದಾರೆ ಎಂದು ಹೇಳಿ? ಯಾರು ಎಲ್ಲಿಯೂ ಎಲ್ಲ. ಎಲ್ಲರೂ ತಮ್ಮ ಪಾಡಿಗೆ ತಾವು ಕ್ಷೇತ್ರದತ್ತ ಮರಳಿದ್ದಾರೆ.ಜೆಡಿಎಸ್-ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಸರಿಯಿಲ್ಲ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು, ಹಾಲಿ ನಾಲ್ಕು ಮಂದಿ ಸಚಿವರಿಂದ ರಾಜೀನಾಮೆ ಪಡೆದು ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಸೂಚನೆ ನೀಡಿಲ್ಲ. ನಾನು ಇಲ್ಲಿನ ಘಟನೆಗಳ ಬಗ್ಗೆ ಹೈಕಮಾಂಡ್‍ಗೆ ಯಾವುದೇ ವರದಿಯನ್ನೂ ನೀಡಿಲ್ಲ. ಎಲ್ಲವೂ ಸುಳ್ಳು.ನಮಗೆ ಶಾಸಕರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅದಕ್ಕೆ ನಾವು ಯಾರನ್ನೂ ಇಲ್ಲಿಗೆ ಬರುವಂತೆ ಕರೆದಿಲ್ಲ. ಎಲ್ಲಾ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮಾತನಾಡಿ, ಆಪರೇಷನ್ ಕಮಲ ವಿಫಲವಾಗಿದೆ.ಅದು ಯಶಸ್ವಿಯಾಗಿದ್ದರೆ ಮಾಧ್ಯಮದವರು ಬಿಜೆಪಿ ನಾಯಕರನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದರು.ಚಾಕಚಕ್ಯತೆಯಿಂದ ಬಿಜೆಪಿ ನಾಯಕರು ಸರ್ಕಾರ ಪತನಗೊಳಿಸಿದ್ದಾರೆ ಎಂದು ವೈಭವೀಕರಿಸಲಾಗುತ್ತಿತ್ತು.ಈಗ ಅದ್ಯಾವುದೂ ನಡೆದಿಲ್ಲ. ಆದರೆ, ಮಾಧ್ಯಮಗಳು ಬಿಜೆಪಿ ನಾಯಕರ ಅಧಿಕಾರ ದಾಹ, ಕುದುರೇ ವ್ಯಾಪಾರ, ಅಸಂವಿಧಾನಿಕ ಕ್ರಮಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಸದ್ಯಕ್ಕೆ ಚರ್ಚೆಯಾಗಬೇಕಿರುವುದು ಈ ವಿಷಯಗಳು.ಕಾಂಗ್ರೆಸ್‍ನಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಎಲ್ಲವೂ ಸರಿಯಾಗಿದೆ.ಸಂಕ್ರಾಂತಿಯ ಕ್ರಾಂತಿಯೂ ಇಲ್ಲ.
ದೀಪಾವಳಿಯ ಧಮಾಕವೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಂತಹ ಪ್ರಯತ್ನಗಳಿಗೆ ಕೈ ಹಾಕಿ ಮುಖಭಂಗ ಅನುಭವಿಸಿದ್ದಾರೆ ಎಂದು ಹೇಳಿದರು.
ಬಿಜೆಪಿಯವರಿಗೆ ಅಧಿಕಾರದ ದಾಹ ಹೆಚ್ಚಾಗಿದೆ.ಅನಗತ್ಯವಾಗಿ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.ಮಹಾರಾಷ್ಟ್ರದ ಮಂತ್ರಿಯೊಬ್ಬರು ಎರಡು ದಿನಗಳಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದು ಹೇಳುತ್ತಾರೆ.ಯಡಿಯೂರಪ್ಪ ಅವರೂ ಸಹ ಎರಡು ದಿನಗಳಲ್ಲಿ ಸಿಹಿ ಸುದ್ದಿ ಬರುತ್ತದೆ ಎಂದು ಹೇಳುತ್ತಿದ್ದಾರೆ.ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು ನಮ್ಮ ಕಾಂಗ್ರೆಸ್ ಶಾಸಕರ ಜತೆ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದಾರೆ.ಇಂತಹ ನಾಟಕಗಳೆಲ್ಲ ಏಕೆ ಬೇಕೆಂದು ಅವರು ಪ್ರಶ್ನಿಸಿದರು.