ಇದೇ 18ರಂದು ಶಾಸಕಾಂಗ ಸಭೆ ಕರೆದ ಕಾಂಗ್ರೇಸ್

ಬೆಂಗಳೂರು, ಜ.16-ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಅಂತಿಮ ಹಂತದ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಇದೇ 18ರಂದು ಶಾಸಕಾಂಗ ಸಭೆ ಕರೆದಿದೆ.

ಆಪರೇಷನ್ ಕಮಲಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗಿರುವ ಎಲ್ಲಾ ಶಾಸಕರು ಶಾಸಕಾಂಗ ಸಭೆಗೆ ಹಾಜರಾಗಬೇಕೆಂದು ವಿಪ್ ಜಾರಿಗೊಳಿಸಲಾಗುತ್ತಿದೆ.ಅಷ್ಟರಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ವದಂತಿಗಳಿದ್ದು, ಒಂದು ವೇಳೆ ರಾಜೀನಾಮೆ ನೀಡಿದರೂ ಅವು ಅಂಗೀಕಾರಗೊಳ್ಳದೇ ಇದ್ದರೆ ಸದರಿ ಶಾಸಕರಿಗೂ ವಿಪ್ ಜಾರಿ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಅಷ್ಟರಲ್ಲಿ ಎಷ್ಟು ಮಂದಿ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದು, ಯಾರೂ ರಾಜೀನಾಮೆ ನೀಡದೇ ಇದ್ದರೆ ಈ ಬಾರಿ ನಡೆಯುವ ಶಾಸಕಾಂಗ ಸಭೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿ ಶಾಸಕರ ದೂರು ದುಮ್ಮಾನಗಳನ್ನು ನೇರವಾಗಿ ಕೇಳಿಸುವ ಸಾಧ್ಯತೆ ಇದೆ.

ಒಂದು ವೇಳೆ ಪರಿಸ್ಥಿತಿ ತಿಳಿಗೊಂಡಿದ್ದೇ ಆದರೆ ಜೆಡಿಎಸ್-ಕಾಂಗ್ರೆಸ್‍ನ ಜಂಟಿ ಶಾಸಕಾಂಗ ಸಭೆ ನಡೆಯುವ ಸಾಧ್ಯತೆಗಳಿವೆ. ಸಭೆಯ ಮೂಲಕ ಕಾಂಗ್ರೆಸ್ ತನ್ನ ಬಲಾಬಲವನ್ನು ಪ್ರಕಟಿಸಲಿದ್ದು, ಬಿಜೆಪಿ ಆಪರೇಷನ್ ಕಮಲಕ್ಕೆ ಸಡ್ಡು ಹೊಡೆಯಲಿದೆ.

ಒಂದೆಡೆ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಿದ್ದು, ಮತ್ತೊಂದು ಕಡೆ ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನವೂ ನಡೆಸುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಶಾಸಕರನ್ನು ಸಂಪರ್ಕಿಸುತ್ತಿದ್ದು, ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಲಾಗುತ್ತಿದೆ.ಇಂದು ಜೇವರ್ಗಿ ಕ್ಷೇತ್ರದ ಶಾಸಕ ಅಜಯ್‍ಸಿಂಗ್, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಗದ್ದಲ್ ಅವರು ಕುಮಾರ ಕೃಪಕ್ಕೆ ಬಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ