ಮೈಸೂರು-ಹುಬ್ಬಳ್ಳಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ

ಮೈಸೂರು, ಜ.16-ಮೈಸೂರು-ಹುಬ್ಬಳ್ಳಿ ವಿಶ್ವಮಾನವ ಎಕ್ಸ್‍ಪ್ರೆಸ್ ರೈಲು ವಿಸ್ತರಣೆಗೆ ಸಂಸದ ಪ್ರತಾಪ್ ಸಿಂಹ ಇಂದು ಬೆಳಗ್ಗೆ ಹಸಿರು ನಿಶಾನೆ ತೋರಿದರು.

ಹುಬ್ಬಳ್ಳಿಯಿಂದ ಮೈಸೂರಿಗೆ ಆಗಮಿಸುವ ವಿಶ್ವಮಾನವ ಎಕ್ಸ್‍ಪ್ರೆಸ್ ರೈಲನ್ನು ನಗರದ ಅಶೋಕಪುರಂ ರೈಲು ನಿಲ್ದಾಣದವರೆಗೆ ವಿಸ್ತರಿಸಲಾಗಿದೆ.
ಬೆಳಿಗ್ಗೆ 8.30ಕ್ಕೆ ಹುಬ್ಬಳ್ಳಿ ಬಿಡುವ ವಿಶ್ವಮಾನವ ಎಕ್ಸ್‍ಪ್ರೆಸ್ ರಾತ್ರಿ 10.50ಕ್ಕೆ ನಗರ ನಿಲ್ದಾಣ ತಲುಪಲಿದೆ. ನಂತರ 11.15ಕ್ಕೆ ಅಶೋಕಪುರಂ ನಿಲ್ದಾಣ ತಲುಪಲಿದೆ.

ಮಾರನೇ ದಿನ ಬೆಳಗಿನ ಜಾವ 5.15ಕ್ಕೆ ಅಶೋಕಪುರಂ ರೈಲು ನಿಲ್ದಾಣದಿಂದ ಹುಬ್ಬಳ್ಳಿಗೆ ವಿಶ್ವಮಾನವ ಎಕ್ಸ್‍ಪ್ರೆಸ್ ಹೊರಡಲಿದೆ. ಮೈಸೂರಿನಿಂದ ಹುಬ್ಬಳ್ಳಿಗೆ ತೆರಳುವವರು ಈ ರೈಲಿನಲ್ಲಿ ಪ್ರಯಾಣಿಸಬಹುದು. ಈ ರೈಲಿನಿಂದ ಸಾಕಷ್ಟು ಮಂದಿಗೆ ಅನುಕೂಲವಾಗಲಿದೆ ಎಂದು ಇದೇ ವೇಳೆ ಪ್ರತಾಪ್‍ಸಿಂಹ ತಿಳಿಸಿದರು.

ರಾತ್ರಿ ವೇಳೆ ಮೈಸೂರಿಗೆ ಬರುವ ಪ್ರಯಾಣಿಕರಿಗೆ ಈ ರೈಲಿನ ಮೂಲಕ ಅಶೋಕಪುರಂಗೆ ತಲುಪುವುದರಿಂದ ಶ್ರೀರಾಮಪುರ, ಕುವೆಂಪುನಗರ, ಸರಸ್ವತಿಪುರಂ, ಜೆ.ಪಿ.ನಗರ ಮತ್ತಿತರ ಪ್ರದೇಶಗಳಿಗೆ ಹೋಗಲು ಅನುಕೂಲವಾಗಲಿದೆ ಎಂದು ಹೇಳಿದರು.

ಅಶೋಕಪುರಂ ಸುತ್ತಮುತ್ತಲ ಪ್ರದೇಶಗಳಿಂದ ಬರುವ ಕೂಲಿ ಕಾರ್ಮಿಕರಿಗೆ ಈ ರೈಲಿನಿಂದ ಹೆಚ್ಚು ಪ್ರಯೋಜನವಾಗಲಿದೆ ಎಂದು ಪ್ರತಾಪ್‍ಸಿಂಹ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ