ಕಾಂಗ್ರೇಸ್ಸಿನ ಮಾಜಿ ಸಚಿವರು ಬಿಜೆಪಿ ಸೇರಲಿದ್ದಾರೆ?

ಮೈಸೂರು, ಜ.16-ಮಹತ್ವದ ಬೆಳವಣಿಗೆಯಲ್ಲಿ ಮೈಸೂರು ಭಾಗದ ಪ್ರಮುಖ ನಾಯಕರು ಹಾಗೂ ಮಾಜಿ ಸಚಿವರೊಬ್ಬರು ಕಮಲ ಪಾಳಯಕ್ಕೆ ಜಿಗಿಯುವ ಸಿದ್ಧತೆಯಲ್ಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡು ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾಗಿ ಎಲ್ಲರ ಹುಬ್ಬೇರುವಂತೆ ಇಡೀ ಮೈಸೂರು ಭಾಗದಲ್ಲಿ ಪ್ರಭಾವ ಹೊಂದಿದ್ದ ಇವರು, ಈಗ ತಮ್ಮ ಬಹುದಿನದ ಗೆಳೆಯ(ಸಿದ್ದು)ನನ್ನು ತೊರೆಯುವ ಮನಸ್ಸು ಮಾಡಿದ್ದಾರೆ ಎಂಬ ಮಾಹಿತಿಗಳು ಕಾಂಗ್ರೆಸ್ ಆಪ್ತ ವಲಯದಲ್ಲಿ ಕೇಳಿ ಬಂದಿದ್ದು, ಇದು ಮೈಸೂರು ಹಾಗೂ ಚಾಮರಾಜನಗರ ಭಾಗದಲ್ಲಿ ಮುಂದಿನ ದಿನಗಳಲ್ಲಿ ಸಂಚಲನ ಮೂಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಈಗಾಗಲೇ ಕೇಂದ್ರ ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಮತ್ತು ಕೆಲ ಬಿಜೆಪಿ ಮುಖಂಡರೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆದಿದ್ದು, ಲೋಕಸಭಾ ಚುನಾವಣೆ ವೇಳೆಗೆ ಕಮಲ ತೆಕ್ಕೆಗೆ ಜಾರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಅವರನ್ನು ಕಾಂಗ್ರೆಸ್‍ನಲ್ಲಿ ಕಡೆಗಣಿಸಲಾಗಿತ್ತು ಮತ್ತು ಅವರ ಭಾವನೆಗಳಿಗೆ ಬೆಲೆ ಇಲ್ಲದಂತಾಗಿತ್ತು. ಅದರಂತೆ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ತಟಸ್ಥವಾಗಿ ಉಳಿದಿದ್ದರು.

ಈಗ ಲೋಕಸಭಾ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಒಡೆದು ಸೆಟೆದು ನಿಲ್ಲುವ ಇರಾದೆಯಲ್ಲಿ ಈ ನಾಯಕ ಇದ್ದು, ಈಗಾಗಲೇ ಬಿಜೆಪಿ ಕೋರ್ ಕಮಿಟಿಯಲ್ಲಿ ಇದರ ಬಗ್ಗೆ ಕೆಲವರು ಪ್ರಸ್ತಾಪಿಸಿದ್ದಾರೆ ಎಂದು ಕೂಡ ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ