ಕೋಲಾರ, ಜ.16-ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ರೋಹಿಣಿ ಕಟೋಚ್ ಸಪಟ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಉತ್ತರ ಪ್ರದೇಶದ ಶಬಾನಾ ಮತ್ತು ಸಮೀರ್ ಬಂಧಿಸಿ ಈ ಪ್ರಕರಣವನ್ನು ಭೇದಿಸಲಾಗಿದೆ ಎಂದು ಹೇಳಿದರು.
ಉತ್ತರ ಪ್ರದೇಶದ ಸಾಹಿದ್ ಎಂಬಾತನೊಂದಿಗೆ ಶಬಾನಾ 11 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ.
ಮದುವೆಯಾದ ನಂತರ ದಂಪತಿ ಉತ್ತರ ಪ್ರದೇಶದಿಂದ ವಿವಿಧ ನಗರಗಳಲ್ಲಿ ನೆಲೆಸಿ ಜೀವನ ನಡೆಸುತ್ತಿದ್ದರು. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯಷ್ಟೆ ಕೋಲಾರಕ್ಕೆ ಬಂದು ಮಹಾಲಕ್ಷ್ಮಿ ಲೇಔಟ್ ಬಡಾವಣೆಯಲ್ಲಿ ವಾಸವಾಗಿದ್ದರು. ಈ ನಡುವೆ ಶಬಾನಾಗೆ ಸಮೀರ್ ಜೊತೆ ಸಂಬಂಧವಿತ್ತು ಎನ್ನಲಾಗಿದೆ.
ಪತಿಯನ್ನು ಹೇಗಾದರೂ ಮಾಡಿ ಕೊಲೆ ಮಾಡಿ ಈತನೊಂದಿಗೆ ಜೀವನ ನಡೆಸಲು ತೀರ್ಮಾನಿಸಿ ಪ್ರಿಯಕರನೊಂದಿಗೆ ಸೇರಿ ಕಳೆದ ಡಿ.27 ರಂದು ರಾತ್ರಿ 11 ಗಂಟೆಯಲ್ಲಿ ಸಾಹಿದ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಪ್ರಿಯಕರನನ್ನು ಕರೆಸಿಕೊಂಡ ಈಕೆ ಮನೆಯಲ್ಲೇ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ಮನೆಯ ಸ್ವಲ್ಪ ದೂರದಲ್ಲಿ ಬಿಸಾಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ನಗರ ಠಾಣೆ ಪೊಲೀಸರಿಗೆ ನನ್ನ ಪತಿಯನ್ನು ನಾಲ್ವರು ಬಂದು ಕರೆದುಕೊಂಡು ಹೋದರೆಂದು ಶಬಾನಾ ನೀಡಿದ್ದ ಹೇಳಿಕೆಯಲ್ಲಿ ಅನುಮಾನ ವ್ಯಕ್ತವಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿಗಳು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಮೊದಲು ಶಬಾನಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಪತ್ರಿಕಾಗೋಷ್ಠಿಯಲ್ಲಿ ಅಡಿಷನಲ್ ಎಸ್‍ಪಿ ರಾಜೇಂದ್ರಕುಮಾರ್, ಡಿವೈಎಸ್‍ಪಿ ಉಮೇಶ್, ಸರ್ಕಲ್ ಇನ್ಸ್‍ಪೆಕ್ಟರ್ ಫಾರೂಕ್ ಪಾಷ ಉಪಸ್ಥಿತರಿದ್ದರು.