ಬೆಂಗಳೂರು, ಜ.15-ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೆಗೌಡ ಅವರು, ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ನೂರು ಶಾಸಕರನ್ನು ಕೂಡಿ ಹಾಕಿಕೊಳ್ಳುವುದು ಮರ್ಯಾದೆ ತರುವ ವಿಷಯವೇ ಎಂದು ಪ್ರಶ್ನಿಸಿದ ಗೌಡರು ಅಸಹ್ಯ ತರುವಂತಹ ಕೆಲಸವನ್ನು ಮಾಡುತ್ತಿದೆ ಎಂದು ಟೀಕಿಸಿದರು.
ಜ.17ರಂದು ನಮ್ಮ ಪಕ್ಷದ ಅಲ್ಪಸಂಖ್ಯಾತರ ಸಮಾವೇಶ ನಡೆಯಲಿದ್ದು, ಆ ಸಭೆಗೆ ಬರುವಂತೆ ಆಹ್ವಾನ ನೀಡಲಾಗಿದೆ.ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಯಾರೂ ವಿಚಲಿತರಾಗಬೇಡಿ.ನಿಮ್ಮೊಂದಿಗೆ ನಾವಿದ್ದೇವೆ ಎಂದು ಶಾಸಕರಿಗೆ ಹೇಳಿರುವುದಾಗಿ ಗೌಡರು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಭ್ರಮೆ ಇದೆ.ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮಾಧ್ಯಮಗಳ ವರದಿ ನೋಡಿ ಆತಂಕದಿಂದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬೆಂಗಳೂರಿಗೆ ಬಂದಿರಬಹುದು ಎಂದರು.
ಯಾರ ಕೈಯಲ್ಲೂ ಏನೂ ಇಲ್ಲ. ಎಲ್ಲವೂ ದೈವದಾಟ.ತಾವು ಯಾವುದರ ಬಗ್ಗೆಯೂ ಗಮನ ಹರಿಸಿಲ್ಲ. ಜನರ ಆಶೀರ್ವಾದ ಹಾಗೂ ಕಾಂಗ್ರೆಸ್ ಪಕ್ಷದ ಸಹಕಾರದಿಂದ ಮೈತ್ರಿ ಸರ್ಕಾರ ನಡೆಯುತ್ತಿದೆ ಎಂದರು.
ಶಾಸಕರಿಗೆ ಹಣದ ಆಮಿಷವೊಡ್ಡುವುದು, ಅದರ ಬಗ್ಗೆ ಮಾತನಾಡುವುದು ಮರ್ಯಾದೆ ತರಲಿದೆಯೇ, ಇದು ಯಾವ ರೀತಿಯ ರಾಜಕೀಯ ಎಂದು ಖಾರವಾಗಿ ನುಡಿದರು.
ನಿತ್ಯವೂ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷ ಈ ರೀತಿ ಮಾಡುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದ ಅವರು, ದೈವದ ಚಿತ್ತ ಇದ್ದಂತಾಗುತ್ತದೆ ಎಂದರು.