ಸರ್ಕಾರದ ಅಸ್ಥಿತ್ವದ ಬಗ್ಗೆ ಆತಂಕವಿಲ್ಲ ಎಂದು ಹೇಳಿದ ಡಿಸಿಎಂ

ಬೆಂಗಳೂರು, ಜ.14- ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಪ್ರಕಟಿಸಬೇಕಾದ ಯೋಜನೆಗಳ ಬಗ್ಗೆ ಅಷ್ಟೇ ಇಂದು ನಡೆದ ಸಚಿವರ ಉಪಹಾರ ಕೂಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ನಮಗೆ ಸರ್ಕಾರದ ಅಸ್ತಿತ್ವದ ಬಗ್ಗೆ ಯಾವುದೇ ಆತಂಕ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಖಾಸಗಿ ಹೊಟೇಲ್‍ನಲ್ಲಿ ನಡೆದ ಉಪಹಾರ ಕೂಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಯಾವ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ಸರ್ಕಾರದ ಅಸ್ತಿತ್ವದ ಬಗ್ಗೆ ನಮಗೆ ಯಾವುದೇ ಆತಂಕವೂ ಇಲ್ಲ. ಆಪರೇಷನ್ ಕಮಲದ ವಿಷಯವನ್ನು ಇಂದಿನ ಸಭೆಯಲ್ಲಿ ಚರ್ಚೆ ಮಾಡಲೇ ಇಲ್ಲ ಎಂದು ಹೇಳಿದರು.

ನಮ್ಮ ಸರ್ಕಾರ ಸ್ಥಿರವಾಗಿದೆ.ಬಿಜೆಪಿಯವರು ಅದನ್ನು ಅಭದ್ರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಕೆಲವು ಶಾಸಕರು ನಾಪತ್ತೆಯಾಗಿರುವುದು ಗಮನಿಸಿದ್ದೇವೆ. ಅವರನ್ನು ವಾಪಸ್ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ಅವರು ಯಾವ ಕಾರಣಕ್ಕಾಗಿ ಬೇರೆ ಕಡೆ ಹೋಗಿದ್ದಾರೆ ಎಂದು ನಮಗೆ ಮಾಹಿತಿ ಇಲ್ಲ. ಕಾಂಗ್ರೆಸ್‍ನ 8 ಮಂದಿ ಶಾಸಕರು ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಮಾಹಿತಿಗಳು ಕೇವಲ ಊಹಾಪೆÇೀಹ ಅಷ್ಟೆ ಎಂದು ಹೇಳಿದರು.

ಕೆಲವು ಶಾಸಕರು ದೇವಸ್ಥಾನಕ್ಕಾಗಿ ಅಥವಾ ತಮ್ಮ ನೆಚ್ಚಿನ ನಾಯಕರನ್ನು ಭೇಟಿ ಮಾಡುವ ಸಲುವಾಗಿ ಮುಂಬೈ, ದೆಹಲಿ ಕಡೆ ಹೋಗಿರಬಹುದು. ಅದನ್ನು ತಪ್ಪು ಎಂದು ಭಾವಿಸಲಾಗುವುದಿಲ್ಲ. ನಮಗೆ ನಮ್ಮ ಶಾಸಕರ ಮೇಲೆ ನಂಬಿಕೆ ಇದೆ. ಹಾಗಾಗಿ ಸ್ವತಂತ್ರವಾಗಿ ಓಡಾಡಿಕೊಂಡಿರಲು ಶಾಸಕರನ್ನು ಬಿಟ್ಟಿದ್ದೇವೆ. ಯಾವ ಶಾಸಕರೂ ಈವರೆಗೂ ತಾವು ಬಿಜೆಪಿಗೆ ಹೋಗುತ್ತೇವೆ ಎಂದು ಹೇಳಿಕೆ ನೀಡಿಲ್ಲ. ತಮಗೆ ಅಸಮಾಧಾನವಿದೆ ಎಂದೂ ಕೂಡ ಯಾರೂ ಮಾತನಾಡಿಲ್ಲ. ನಮಗೆ ನಮ್ಮ ಸರ್ಕಾರದ ಅಸ್ತಿತ್ವದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ಉಮೇಶ್ ಜಾಧವ್ ಬಿಜೆಪಿ ಸೇರುತ್ತಾರೆ ಎಂದು ಅವರ ಸಹೋದರ ರಾಮಚಂದ್ರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್ ಅವರು, ನಮಗೆ ಶಾಸಕರಾದ ಉಮೇಶ್ ಜಾಧವ್ ಅವರ ಹೇಳಿಕೆಯೇ ಪ್ರಮುಖ, ಅವರ ಸಹೋದರನ ಮಾತುಗಳಲ್ಲ. ಉಮೇಶ್ ಜಾಧವ್ ಈವರೆಗೂ ತಾವು ಪಕ್ಷ ಬಿಡುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು ಪ್ರತಿಕ್ರಿಯಿಸಿದರು.

ಬಜೆಟ್ ಬಗ್ಗೆ ಚರ್ಚೆ: ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಇಂದು ತಾವು ಕಾಂಗ್ರೆಸ್ ಸಚಿವರ ಸಭೆ ಕರೆದಿದ್ದಾಗಿ ಪರಮೇಶ್ವರ್ ಹೇಳಿದರು.

ನಮ್ಮ ಪಕ್ಷದ ಎಲ್ಲಾ ಸಚಿವರು ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರುಗಳು ಸಭೆಯಲ್ಲಿ ಭಾಗವಹಿಸಿದ್ದರು.

ಫೆಬ್ರವರಿ ಮೊದಲ ವಾರದಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ.ಅದರಲ್ಲಿ ಯಾವೆಲ್ಲ ಯೋಜನೆಗಳಿರಬೇಕು ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕೃಷಿಕರ ಸಾಲ ಮನ್ನಾವನ್ನು ಎರಡೂ ಪಕ್ಷಗಳು ಒಪ್ಪಿಕೊಂಡು ಜಾರಿಗೆ ತಂದಿವೆ. ಅದರ ಹೊರತಾಗಿ ಆರ್ಥಿಕ ಲಭ್ಯತೆ ಆಧರಿಸಿ ಕಾರ್ಯಕ್ರಮ ರೂಪಿಸಲು ಸಮ್ಮಿಶ್ರ ಸರ್ಕಾರ ಪ್ರಯತ್ನಿಸುತ್ತಿದೆ. ಎಲ್ಲಾ ಸಚಿವರು ತಮ್ಮ ಇಲಾಖೆಯಲ್ಲಿ ಲಭ್ಯವಿರುವ ಮತ್ತು ಅಗತ್ಯವಿರುವ ಅನುದಾನದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಚುನಾವಣಾ ವರ್ಷವಾಗಿರುವುದರಿಂದ ಹೊಸದಾಗಿ ಯಾವ ಕಾರ್ಯಕ್ರಮ ಜಾರಿಗೊಳಿಸಬೇಕು ಎಂಬ ಪ್ರಸ್ತಾವನೆ ಸಲ್ಲಿಸಬೇಕು.

ಇಲಾಖೆ ಮೇಲಿನ ಚರ್ಚೆ ವೇಳೆ ತಾವು ಈ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂಬ ಚರ್ಚೆಗಳಾಗಿವೆ. ಈ ಹಿಂದಿನ ಬಜೆಟ್‍ನಲ್ಲಿ ಘೋಷಿಸಲಾದ ಯೋಜನೆಗಳು ಜಾರಿಯಾಗದೆ ಇರುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದಿನ ಬಜೆಟ್‍ನಲ್ಲಿ ಇಂದಿನ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆಗಳನ್ನು ಆಧರಿಸಿ ಹೊಸ ಕಾರ್ಯಕ್ರಮ ಘೋಷಿಸಲಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ