ಬೆಂಗಳೂರು, ಜ.14-ದೆಹಲಿಯಲ್ಲಿ ಬಿಜೆಪಿ ಶಾಸಕರು ಬೀಡುಬಿಟ್ಟಿರುವ ಬೆನ್ನ ಹಿಂದೆಯೇ ಒಂದರ ಮೇಲೊಂದರಂತೆ ಕಾಂಗ್ರೆಸ್ ಸಭೆ ನಡೆಸುತ್ತಿದ್ದು, ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಉಮೇಶ್ ಜಾದವ್, ಶಿವರಾಮ್ ಹೆಬ್ಬಾರ್ ಸೇರಿದಂತೆ ಕೆಲವು ಶಾಸಕರು ನಾಪತ್ತೆಯಾಗಿರುವುದು ಸಮ್ಮಿಶ್ರ ಸರ್ಕಾರವನ್ನು ಗಲಿಬಿಲಿಗೊಳಿಸಿದೆ.
ಈಗಾಗಲೇ ಎರಡು ಬಾರಿ ಆಪರೇಷನ್ ಕಮಲಕ್ಕೆ ಯತ್ನಿಸಿ ವಿಫಲವಾದ ಬಿಜೆಪಿ ಮೂರನೇ ಬಾರಿಯೂ ಯಶಸ್ವಿಯಾಗುವುದಿಲ್ಲ ಎಂದು ಧೈರ್ಯವಾಗಿದ್ದ ಕಾಂಗ್ರೆಸ್ ನಾಯಕರಿಗೆ ಚಳಿಜ್ವರ ಬಂದಂತಾಗಿದೆ.
ಕಾಂಗ್ರೆಸ್ನ ಕೆಲವು ಶಾಸಕರು ಸಂಪರ್ಕಕ್ಕೆ ಸಿಗದೆ ನೇರವಾಗಿ ಬಿಜೆಪಿ ನಾಯಕರ ಜತೆ ಮಾತುಕತೆ ನಡೆಸಿರುವುದು ಒಂದೆಡೆಯಾದರೆ, ನಾವು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಪಕ್ಷದಲ್ಲೇ ಉಳಿಯುತ್ತೇವೆ ಎಂದು ನಂಬಿಸುತ್ತಲೇ ಮತ್ತೊಂದೆಡೆ ಬಿಜೆಪಿಯ ಆಪರೇಷನ್ ಕಮಲದತ್ತ ಒಲವು ತೋರಿರುವ ಶಾಸಕರು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.
ನಿನ್ನೆವರೆಗೂ ಧೈರ್ಯವಾಗಿದ್ದ ಕಾಂಗ್ರೆಸ್ ಪಾಳಯದಲ್ಲಿ ಇದ್ದಕ್ಕಿದ್ದಂತೆ ಗೊಂದಲಗಳು ಕಾಣಿಸಿಕೊಳ್ಳಲು ಆರಂಭಿಸಿವೆ. ಕೆಲವು ಶಾಸಕರು ಯಾರ ಸಂಪರ್ಕಕ್ಕೂ ಸಿಗದೆ ದಿಢೀರ್ ನಾಪತ್ತೆಯಾಗಿದ್ದಾರೆ.ಬಹುತೇಕ ಶಾಸಕರು ಮುಂಬೈನಲ್ಲಿದ್ದು, ಇಂದು ಸಂಜೆಯೊಳಗೆ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡುವ ನಿರೀಕ್ಷೆಗಳಿವೆ.
ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಸಚಿವರ ಸಭೆಯಲ್ಲಿ ಆಪರೇಷನ್ ಕಮಲ ಮತ್ತು ಸರ್ಕಾರ ಪತನಗೊಳಿಸುವ ಬಿಜೆಪಿಯ ಪ್ರಯತ್ನದ ಬಗ್ಗೆ ತೀವ್ರ ಆಕ್ರೋಶ ಉಂಟಾಗಿದೆ.