ತುಮಕೂರು, ಜ.13- ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಹುದ್ದೆಗೆ ಅದರದ್ದೇ ಆದ ಘನತೆ ಇದೆ. ಇಂತಹ ಘನತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಲಘುವಾಗಿ ಮಾತನಾಡಿರುವುದು ಅವರ ಘನತೆಗೆ ತಕ್ಕುದಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಗ್ಗೆ ಪ್ರಧಾನಿಯವರು ಲಘುವಾಗಿ ಮಾತನಾಡಿರುವುದು ಅವರ ಸಂಸ್ಕøತಿಯನ್ನು ತೋರಿಸುತ್ತದೆ ಎಂದರು.
ಕುಮಾರಸ್ವಾಮಿ ಅವರು ಸಂವಿಧಾನಾತ್ಮಕವಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ. ಅದರ ಅರಿವು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಇರಬೇಕು ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಿಸಿಎಂ ಚುನಾವಣೆ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆ ಮಾತನಾಡುತ್ತಾರೆ ಎಂಬುದು ಜನತೆಗೆ ಗೊತ್ತಿದೆ. ಯಾರು ಇಟ್ಟಿಗೆ ತೆಗೆದುಕೊಂಡು ಹೋದರು, ಯಾರು ಚಂದಾ ವಸೂಲಿ ಮಾಡಿದರು ಎಂಬುದೆಲ್ಲದರ ಅರಿವಿದೆ ಎಂದು ಹೇಳಿದರು.
ರಾಮಮಂದಿರ ಕಟ್ಟುವುದಾದರೆ ಕಟ್ಟಲಿ, ಅದಕ್ಕೆ ಕಾಂಗ್ರೆಸ್ ತಕರಾರಿಲ್ಲ. ರಾಮಮಂದಿರ ಕಟ್ಟುತ್ತೇವೆ ಎಂದುಕೊಂಡೇ ಮೂರ್ನಾಲ್ಕು ಚುನಾವಣೆಯನ್ನು ಬಿಜೆಪಿ ಎದುರಿಸಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ನಾವು ಐದು ವರ್ಷ ಪೂರೈಸುತ್ತೇವೆ. ಬಿಜೆಪಿಯವರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
ಲೋಕಸಭೆಗೆ ನಾವು ಜೆಡಿಎಸ್ ಜತೆಯಾಗಿಯೇ ಹೋಗುತ್ತೇವೆ. ಕ್ಷೇತ್ರ ಹಂಚಿಕೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಚರ್ಚೆ ಮಾಡಿ ನಿರ್ಧರಿಸುತ್ತೇವೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವ ವಿಚಾರ ನನಗೆ ತಿಳಿಯದು. ಆದರೆ, ಕಾಂಗ್ರೆಸ್‍ನಿಂದ ಅಂಬರೀಷ್ ಪುತ್ರನಿಗೆ ಟಿಕೆಟ್ ನೀಡುವ ವಿಚಾರ ಹೈಕಮಾಂಡ್‍ಗೆ ಬಿಟ್ಟದ್ದು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.