ಮತ್ತೆ ಮುನ್ನೆಲೆಗೆ ಬಂದ ವೀರಶೈವ-ಲಿಂಗಾಯಿತ ಹೋರಾಟ

ಹುಬ್ಬಳ್ಳಿ, ಜ.13-ವೀರಶೈವ-ಲಿಂಗಾಯಿತ ಹೋರಾಟ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ನಡುವೆ ಟಾಕ್ ಫೈಟ್ ಜೋರಾಗಿದೆ.

ವೀರಶೈವ- ಲಿಂಗಾಯಿತ ಮುಖಂಡರಿಬ್ಬರು ವಾಕ್ಸಮರಕ್ಕಿಳಿದಿದ್ದಾರೆ.ನಿನ್ನೆಯಷ್ಟೇ ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿ ಲಿಂಗಾಯಿತ ಪ್ರತ್ಯೇಕ ಧರ್ಮ ಹೋರಾಟದಿಂದ ನನ್ನ ಮಗನಿಗೆ ಹಾಗೂ ಇನ್ನಿತರ ಹಲವು ಲಿಂಗಾಯಿತರಿಗೆ ಸೋಲಾಯಿತು ಎಂದು ನೀಡಿದ ಹೇಳಿಕೆಗೆ ಇಂದು ಎಂ.ಬಿ.ಪಾಟೀಲ್ ಅವರು ಶಾಮನೂರು ವಿರುದ್ಧ ಹರಿಹಾಯ್ದಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರಿಗೆ ವೀರಶೈವ ರತ್ನ ಪ್ರಶಸ್ತಿ ಕೊಟ್ಟಿದ್ದಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಅವರು ನನ್ನ ತಂದೆ ಸಮಾನರು. ಆದರೆ, ಅವರು ಸ್ವಾರ್ಥಿಗಳು. ಕುಟುಂಬದ ಏಳ್ಗೆ ಬಗ್ಗೆ ಮಾತ್ರ ಮಾತನಾಡುತ್ತಾರೆ, ಮತ್ತೊಬ್ಬರ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಾರೆ. ಅವರು ಸ್ವಾರ್ಥ ಜೀವನ ನಡೆಸಿದವರು. ಇಲ್ಲಿಯವರೆಗೆ ಯಾರಿಗೆ ಏನು ಮಾಡಿದ್ದಾರೆ ಎಂಬುದನ್ನು ತೋರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಶಂಕರಪ್ಪ ಅವರು ಮೊದಲು ಏನಾಗಿದ್ದರು ಎಂಬುದನ್ನು ಆರ್ಥ ಮಾಡಿಕೊಳ್ಳಬೇಕು. ಈ ಮೊದಲು ಕಿರಾಣಿ ಅಂಗಡಿ ಇಟ್ಟುಕೊಂಡು ದಲ್ಲಾಳಿ ಕೆಲಸ ಮಾಡಿಕೊಂಡಿದ್ದವರು. ಬೇರೊಬ್ಬರ ಬಿ ಫಾರಂ ಹರಿದು ಹಾಕಿ ಚುನಾವಣೆಯಲ್ಲಿ ಗೆದ್ದವರು. ಮತ್ತೊಬ್ಬರನ್ನು ತುಳಿದು ಬಾಪೂಜಿ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಇವರು ಬೇರೆಯವರು ಸೋತ ಬಗ್ಗೆ ಮಾತನಾಡುತ್ತಾರೆ. ಅವರ ಮಗ ಈ ಹಿಂದೆ ಸೋತಾಗ ವೀರಶೈವ ಹೋರಾಟ ಎಲ್ಲಿ ಹೋಗಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅವರು ಸ್ಪರ್ಧಿಸುವ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿದೆ. ಈ ಬಾರಿ ಮುಸ್ಲಿಂ ಸಮುದಾಯದ ಹೆಚ್ಚು ಮತ ಕಾಂಗ್ರೆಸ್‍ಗೆ ಬಂದಿದೆ. ಯಾವುದೇ ಕಾರಣಕ್ಕೂ ಕೀಳುಮಟ್ಟದ ರಾಜಕಾರಣ ಮಾಡಬಾರದು ಎಂದು ಹರಿಹಾಯ್ದರು.

ಇವರ ಜನ್ಮ ದಾಖಲೆಗಳನ್ನು ತೆಗೆದು ನೋಡಿದರೆ ಹಿಂದೂ ಲಿಂಗಾಯಿತ ಎಂದು ನಮೂದಾಗಿದೆ. ನೀವು ಮಾತನಾಡಿದರೆ ಪರವಾಗಿಲ್ಲ. ನಾನು ಮಾತನಾಡಿದರೆ ನಿಮ್ಮ ಮರ್ಯಾದೆ ಹೋಗುತ್ತದೆ. ನಾನು ಯಾರಿಗೂ ಹೆದರುವುದಿಲ್ಲ. ಅವರು ಈ ವಿವಾದವನ್ನು ಇಲ್ಲಿಗೆ ನಿಲ್ಲಿಸಿದರೆ ಉತ್ತಮ. ನನಗೆ ಎಲ್ಲವೂ ಗೊತ್ತಿದೆ.ಇಲ್ಲವಾದರೆ ಅವರ ಬಗ್ಗೆ ಎಲ್ಲವನ್ನೂ ಮಾತನಾಡಬೇಕಾದೀತು. ಲಿಂಗಾಯಿತ ಧರ್ಮದ ಬಗ್ಗೆ ಹೋರಾಟದ ಹಾದಿ ಅಲ್ಲ. ನಮ್ಮ ಮುಂದೆ ಇರುವುದು ಕಾನೂನು ಹೋರಾಟ ಎಂದು ಹೇಳುವ ಮೂಲಕ ಪ್ರತ್ಯೇಕ ಧರ್ಮ ಹೋರಾಟದ ಮುಂದುವರಿಕೆಯ ಮುನ್ಸೂಚನೆಯನ್ನು ನೀಡಿದರು.

ಎಲ್ಲಾ ನಿರ್ಣಯಗಳನ್ನು ನಮ್ಮ ಲಿಂಗಾಯಿತ ಜಾಗತಿಕ ಸಮಾವೇಶ ತೆಗೆದುಕೊಳ್ಳುತ್ತದೆ. ಕೆಲವೊಂದು ಶಕ್ತಿಗಳು ಇದನ್ನು ವಿರೋಧಿಸಿವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ನಮಗೆ ಬೆಂಬಲ ನೀಡುತ್ತದೆ ಎಂದರು.

ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ-ಎಸ್‍ಪಿ ಒಂದಾಗಿದ್ದು, ಮೋದಿಗೆ ಭಯವಾಗಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಮುರಿದು ಬೀಳಬೇಕೆಂದು ಕಾಯುತ್ತಿದ್ದಾರೆ. ಅದಕ್ಕಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧ ಮೋದಿ ಮಾತನಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ