ಸಮಾಜದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ : ಸಂತೋಷ್ ಹೆಗಡೆ

ಬೆಂಗಳೂರು, ಜ.13-ನಗರದಲ್ಲಿಂದು ರಾಜ್ಯ ಸರ್ಕಾರಿ ನೌಕರರ (ಮಾಜಿ ಸೈನಿಕರ) ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಅವರು, ನಾನು ಲೋಕಾಯುಕ್ತನಾಗಿದ್ದಾಗ ಪ್ರಾಮಾಣಿಕ ಅಧಿಕಾರಿಗೆ ಆಡಳಿತದಲ್ಲಿ 32 ಬಾರಿ ವರ್ಗಾವಣೆಯಾಗಿದ್ದನ್ನು ನೋಡಿದ್ದೇನೆ.

ಸಮಾಜದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಣಬಲ, ಅಧಿಕಾರಕ್ಕೆ ಹೆಚ್ಚಿನ ಬೆಲೆ ಸಿಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಾಮಾಣಿಕರಿಗೆ ರಕ್ಷಣೆ ಸಿಗದಿದ್ದರೆ ಸಮಾಜ ಸಂಕಷ್ಟಕ್ಕೀಡಾಗಬೇಕಾಗುತ್ತದೆ.ಸಮಾಜದ ಸಮಸ್ಯೆಗಳು ನನಗೆ ಅರ್ಥವಾಗಿದ್ದು ಲೋಕಾಯುಕ್ತನಾದ ನಂತರ. ಆ ವರೆಗೂ ನ್ಯಾಯಾಧೀಶನಾಗಿ ನನ್ನ ಪಾಲಿನ ಕೆಲಸಗಳನ್ನು ನಾನು ಮಾಡಿಕೊಂಡಿದ್ದೆ. ಲೋಕಾಯುಕ್ತನಾದ ನಂತರ ಜನಸಾಮಾನ್ಯರ ಕಷ್ಟಗಳು ಅರಿವಾಗತೊಡಗಿದವು. ಎಲ್ಲರೂ ಹಣ, ಅಧಿಕಾರಕ್ಕೆ ಆಸೆ ಪಡುತ್ತಾರೆ.ಜನರಸೇವೆಗೆ ಯಾರಿಗೂ ಹೆಚ್ಚಿನ ಕಾಳಜಿ ಇಲ್ಲ. ಇದು ಯಾವುದೋ ಒಂದು ಸರ್ಕಾರದ ಅವಧಿಯಲ್ಲಿ ಆದ ಸಮಸ್ಯೆ ಅಲ್ಲ. ಎಲ್ಲಾ ಸರ್ಕಾರದಲ್ಲೂ ಎಲ್ಲಾ ಕಾಲದಲ್ಲೂ ಈ ರೀತಿಯ ತೊಂದರೆಗಳಾಗಿವೆ ಎಂದು ಹೇಳಿದರು.

ಲೋಕಾಯುಕ್ತನಾಗಿ ಕೆಲಸ ಮಾಡುವ ವೇಳೆ ಸಮಾಜದ ಬದಲಾವಣೆ ಮಾಡಲು ನಾನು ಸಾಕಷ್ಟು ಪ್ರಯತ್ನಪಟ್ಟೆ.ಆದರೆ ಪೂರ್ತಿಯಾಗಿ ಸಾಧ್ಯವಾಗಲಿಲ್ಲ. ಸೈನಿಕರು ದೇಶದ ರಕ್ಷಣೆಗಾಗಿ ಹೋರಾಡುತ್ತಾರೆ.ಅವರನ್ನು ಪ್ರೀತಿ, ಆದರಗಳಿಂದ ನೋಡಿಕೊಳ್ಳಬೇಕಾಗಿರುವುದು ಸಮಾಜ ಹಾಗೂ ಸರ್ಕಾರದ ಕರ್ತವ್ಯ.ಆದರೆ ನಿವೃತ್ತಿ ನಂತರ ಸಿಗಬೇಕಾದ ಸೌಲಭ್ಯಗಳು ಸೈನಿಕರಿಗೆ ಸಿಗುತ್ತಿಲ್ಲ. ಸರ್ಕಾರ ಜಮೀನು ಮಂಜೂರು ಮಾಡುತ್ತದೆ.ಆದರೆ ಅದು ಸೈನಿಕರ ಕೈ ಸೇರುವುದಿಲ್ಲ. ನ್ಯಾಯಾಲಯದಲ್ಲಿ ಹೋರಾಟ ಮಾಡಿಯೇ ಜಮೀನು ಪಡೆದಂತಹ ಪ್ರಕರಣಗಳು ಸಾಕಷ್ಟಿವೆ.ಪಿಂಚಣಿ ಸೇರಿದಂತೆ ಹಲವಾರು ಸೌಲಭ್ಯಗಳು ಸೈನಿಕರಿಗೆ ಸರಿಯಾಗಿ ತಲುಪುವುದಿಲ್ಲ. ಇಂತಹ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಹೇಳಿದರು.

ನಿವೃತ್ತ ಲೆಫ್ಟಿನೆಂಟ್ ಜನರಲ್ ಪಿ.ಆರ್.ಸಂಪತ್‍ಕುಮಾರ್, ಕರ್ನಲ್ ಜಿ.ಜೆ.ಸಿಂಗ್, ಸರ್ಕಾರ ನೌಕರರ (ಮಾಜಿ ಸೈನಿಕರ) ಸಂಘದ ಅಧ್ಯಕ್ಷ ಕೆ.ಎ.ಮಥಾಯಿಸ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ