ಬೆಂಗಳೂರು,ಜ.13-ಕಾಂಗ್ರೆಸ್ನಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಮುನಿಸಿಕೊಂಡಿರುವ ಅತೃಪ್ತ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಸಮ್ಮಿಶ್ರ ಸರ್ಕಾರ ಸಂಕ್ರಾಂತಿ ನಂತರ ಪತನಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.
ಈಗಾಗಲೇ ಕಾಂಗ್ರೆಸ್ನ ಎಂಟು ಮಂದಿ ಶಾಸಕರು ದೆಹಲಿಯ ರಹಸ್ಯ ಸ್ಥಳವೊಂದರಲ್ಲಿ ಬೀಡುಬಿಟ್ಟಿದ್ದು, ಬಿಜೆಪಿ ವರಿಷ್ಠರ ಭೇಟಿಗಾಗಿ ಕಾದು ಕುಳಿತಿದ್ದಾರೆ.ಈ ಬೆಳವಣಿಗೆ ಆಡಳಿತಾರೂಢ ದೋಸ್ತಿ ಸರ್ಕಾರದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.ಸರ್ಕಾರ ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಹರಸಾಹಸ ನಡೆಸುತ್ತಿದ್ದಾರೆ. ಪಕ್ಷದಿಂದ ದೂರ ಸರಿಯುತ್ತಿರುವ ಶಾಸಕರನ್ನು ಸಂಪರ್ಕಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕರು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾರೊಬ್ಬರು ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಇದು ಆತಂಕಕ್ಕೀಡು ಮಾಡಿದೆ.
ಶನಿವಾರವೇ ನವದೆಹಲಿಗೆ ಆಗಮಿಸಿರುವ ಎಂಟು ಮಂದಿ ಶಾಸಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದ್ದಾರೆ.ಆದರೆ ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪರಿಷತ್ ಸಭೆ ನಡೆಯತ್ತಿರುವುದರಿಂದ ಭೇಟಿಯಾಗಲು ಸಾಧ್ಯವಾಗಿಲ್ಲ.
ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಮುನಿಸಿಕೊಂಡಿರುವ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಹದಿನೆಂಟು ಶಾಸಕರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಯಾವುದೇ ಸಂದರ್ಭದಲ್ಲಾದರೂ ದೋಸ್ತಿ ಸರ್ಕಾರ ಪತನವಾಗುವ ಲಕ್ಷಣಗಳು ಗೋಚರಿಸಿದ್ದು, ಬಿಜೆಪಿ ಅಧಿಕಾರ ಹಿಡಿಯುವ ಕಸರತ್ತನ್ನು ಮುಂದುವರೆಸಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಹೊಸಪೇಟೆಯ ಆನಂದ್ ಸಿಂಗ್, ಮಸ್ಕಿಯ ಪ್ರತಾಪ್ಗೌಡ ಪಾಟೀಲ್, ಅಥಣಿಯ ಮಹೇಶ್ ಕುಮಟಳ್ಳಿ, ಕಾಗವಾಡದ ಶ್ರೀಮಂತಪಾಟೀಲ್, ಚಿಕ್ಕೋಡಿಸದಲಗದ ಗಣೇಶ್ ಹುಕ್ಕೇರಿ, ಬಸವಕಲ್ಯಾಣದ ನಾರಾಯಣರಾವ್, ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಹಿರೇಕೆರೂರಿನ ಬಿ.ಸಿ.ಪಾಟೀಲ್ ಮತ್ತಿತರ ಶಾಸಕರು ಯಾವುದೇ ಸಂದರ್ಭದಲ್ಲಿ ದೆಹಲಿಗೆ ತೆರಳಿ ಬಿಜೆಪಿಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಸರ್ಕಾರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು, ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ, ಕ್ಷೇತ್ರದಲ್ಲಿ ಯಾವುದೇ ಕೆಲಸವಾಗದಿರುವುದು, ಅಧಿಕಾರಿಗಳ ವರ್ಗಾವಣೆಯಲ್ಲಿ ಕಡಗಣನೆ, ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಸೇರಿದಂತೆ ಹಲವು ವಿಷಯಗಳಲ್ಲಿ ಈ ಶಾಸಕರು ಅತೃಪ್ತಿ ಹೊಂದಿದ್ದಾರೆ.
ಜೆಡಿಎಸ್ ಶಾಸಕರಿಗೂ ಗಾಳ:
ಕಾಂಗ್ರೆಸ್ನ ಅತೃಪ್ತರು ಬಿಜೆಪಿ ಸೇರಲು ಹಿಂದೇಟು ಹಾಕಿದರೆ ಬಿಜೆಪಿ, ಆರು ಮಂದಿ ಜೆಡಿಎಸ್ ಶಾಸಕರಿಗೂ ಗಾಳ ಹಾಕಿದೆ. ಪಕ್ಷಕ್ಕೆ ಬಂದರೆ ಆರು ಮಂದಿಯಲ್ಲಿ ಇಬ್ಬರಿಗೆ ಸಂಪುಟದಲ್ಲಿ ಸಚಿವ ಸ್ಥಾನ, ಉಳಿದ ನಾಲ್ಕು ಮಂದಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ನಾನಾ ರೀತಿಯ ಆಶ್ವಾಸನೆಗಳನ್ನು ನೀಡಲಾಗಿದೆ.
ರಹಸ್ಯ ಸ್ಥಳದಲ್ಲಿ ಶಾಸಕರು:
ದೆಹಲಿಗೆ ಬಂದಿರುವ ಕಾಂಗ್ರೆಸಿಗರಿಗೆ ಪ್ರತಿಷ್ಠಿತ ಪಂಚತಾರ ಹೋಟೆಲ್ನಲ್ಲಿ ಯಾರಿಗೂ ತಿಳಿಯದಂತೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮದವರಿಗೂ ಈ ವಿಷಯ ಸೋರಿಕೆಯಾಗದಂತೆ ಎಚ್ಚರ ವಹಿಸಲಾಗಿದೆ.
ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ಈ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ನೇತೃತ್ವ ವಹಿಸಿಕೊಂಡಿದ್ದಾರೆ.
ಈ ಬೆಳವಣಿಗೆಗಳ ನಡುವೆಯೇ ದೆಹಲಿಯಲ್ಲಿರುವ ಬಿಜೆಪಿಯ 104 ಶಾಸಕರು ಕರ್ನಾಟಕ ಭವನ ಬಿಟ್ಟು ಎಲ್ಲಿಗೂ ತೆರಳದಂತೆ ಯಡಿಯೂರಪ್ಪ ಕಟ್ಟಪ್ಪಣೆ ವಿಧಿಸಿದ್ದಾರೆ.
ಸಂಜೆ ಸಭೆ ಮುಗಿದ ಬಳಿಕ ಎಲ್ಲ ಶಾಸಕರನ್ನು ದೆಹಲಿ ಹೊರವಲಯದ ರೆಸಾರ್ಟ್ನಲ್ಲಿ ವಾಸ್ತವ್ಯಕ್ಕೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಸಭೆ ಮುಗಿದ ಬಳಿಕ ಕೆಲವು ಶಾಸಕರು ಬೆಂಗಳೂರಿಗೆ ಹಿಂತಿರುಗಲು ಬಿಎಸ್ವೈ ಬಳಿ ಅನುಮತಿ ಕೇಳಿದರಾದರೂ ಅದಕ್ಕೆ ಒಪ್ಪಿಗೆ ಕೊಟ್ಟಿಲ್ಲ.
ಈ ಹಿಂದೆ ದೆಹಲಿಗೆ ಎಲ್ಲ ಶಾಸಕರನ್ನು ಒಟ್ಟಿಗೆ ಕರೆಸಿಕೊಂಡ ನಿದರ್ಶನಗಳು ಇಲ್ಲ. ಈಗ ಲೋಕಸಭೆ ಚುನಾವಣೆ ನೆಪದಲ್ಲಿ ಎಲ್ಲ ಶಾಸಕರನ್ನು ಸಭೆಗೆ ಬರುವಂತೆ ಸೂಚಿಸಲಾಗಿತ್ತು.ಅಂದರೆ ಯಾವುದೇ ಶಾಸಕರು ಕೈಕೊಡಬಾರದೆಂಬ ಲೆಕ್ಕಾಚಾರ ಹಾಕಿಯೇ ಬಿಜೆಪಿ ಈ ತಂತ್ರ ಹೆಣೆದಿದೆ.
ಇಂದು ಮಧ್ಯಾಹ್ನ ದೆಹಲಿಯ ವೆಸ್ಟರ್ನ್ಕೋಟ್ ಗೆಸ್ಟ್ಹೌಸ್ನಲ್ಲಿ ಅಮಿತ್ ಷಾ ಲೋಕಸಭೆ ಚುನಾವಣೆ ಕುರಿತಂತೆ ಸಭೆ ನಡೆಸಿದ ಬಳಿಕ ಎಲ್ಲ ಶಾಸಕರು ರಹಸ್ಯ ಸ್ಥಳಕ್ಕೆ ತೆರಳಲಿದ್ದಾರೆ.
ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಕ್ರಾಂತಿಯೇ ನಡೆಯುವ ಸಾಧ್ಯತೆ ಇದ್ದು, ಅತೃಪ್ತ ಶಾಸಕರನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಶತ ಪ್ರಯತ್ನ ಮುಂದುವರೆಸಿದ್ದಾರೆ. ಈಗಾಗಲೇ ಅವರೆಲ್ಲರೂ ಬಹುದೂರ ಸಾಗಿರುವುದರಿಂದ ದೋಸ್ತಿ ಸರ್ಕಾರದ ಭವಿಷ್ಯವೇನು ಎಂಬ ಪ್ರಶ್ನೆ ಎದುರಾಗಿದೆ.