ಬೆಂಗಳೂರು, ಜ.13- ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೇಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಲೋಕಸಭೆ ಚುನಾವಣೆ ಎದುರಿಸಲಿದ್ದೇವೆ. ಮೋದಿ ಅವರ ಪ್ರಚಾರ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತೇವೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೂರೂ ರಾಜ್ಯಗಳಲ್ಲಿ ಬಿಜೆಪಿ ಸೋಲನುಭವಿಸಿದೆ. ಅವರ ಅಬ್ಬರದ ಭಾಷಣಗಳಿಗೆ ಜನ ಮನ್ನಣೆ ನೀಡುವುದಿಲ್ಲ ಎಂಬುದು ಗೊತ್ತಾಗಿದೆ ಎಂದು ಹೇಳಿದರು.
ಬದಲಾದ ಕಾಲಕ್ಕೆ ತಕ್ಕಂತೆ ಪ್ರಚಾರದ ವೈಖರಿಯನ್ನು ಬದಲಾವಣೆ ಮಾಡಿಕೊಳ್ಳುತ್ತೇವೆ. ಇದೇ 18ರಂದು ಪ್ರಚಾರ ಸಮಿತಿ ಅಧ್ಯಕ್ಷನಾಗಿ ಅರಮನೆ ಮೈದಾನದಲ್ಲಿ ಅಧಿಕಾರ ಸ್ವೀಕರಿಸಿ ಅಂದಿನಿಂದಲೇ ಲೋಕಸಭೆ ಚುನಾವಣೆ ರಣಕಹಳೆ ಮೊಳಗಿಸುತ್ತೇವೆ ಎಂದು ಹೇಳಿದರು.
ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆ, ರಾಜ್ಯದಲ್ಲಿ ನಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಜನತೆ ಮುಂದೆ ಹೋಗುತ್ತೇವೆ. ಇದಲ್ಲದೆ, ಕಾಂಗ್ರೆಸ್ ಬಗ್ಗೆ, ನಮ್ಮ ನಾಯಕರ ಸಾಧನೆಗಳ ಬಗ್ಗೆ ಬಿಜೆಪಿ ಮಾಡುತ್ತಿರುವ ಅಪಪ್ರಚಾರಗಳನ್ನು ಜನತೆಯ ಮುಂದಿಡುತ್ತೇವೆ ಎಂದು ಹೇಳಿದರು.
ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪ್ರಚಾರ ಮಾಡಲಾಗುವುದು ಎಂದು ಅವರು ಹೇಳಿದರು.
ಪಂಚರಾಜ್ಯಗಳ ಚುನಾವಣೆ ಸೋಲಿನಿಂದ ಹತಾಶರಾಗಿರುವ ಮೋದಿ ಅವರು ಬೇರೆ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡುತ್ತಾರೆ ಎಂದು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.