ಬೆಂಗಳೂರು, ಜ.12- ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಳೆಗೆಗಳು ಮತ್ತು ವ್ಯಾಪಾರಿಗಳ ಸಂಘದ ಮುಖ್ಯಸ್ಥ ಆದಿತ್ಯ, ಇಂದಿರಾನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿದ್ದು, ಇದರಿಂದ ವಸತಿ ಪ್ರದೇಶದಲ್ಲಿ ವಾಸ ಮಾಡುತ್ತಿರುವವರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ವಾಣಿಜ್ಯ ಚಟುವಟಿಕೆ ನಡೆಸುವ ಅಂಗಡಿ, ಮಳಿಗೆಗಳು, ಕಚೇರಿಗಳನ್ನು ಮುಚ್ಚುವಂತೆ ನ್ಯಾಯಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ನೋಟಿಸ್ ನೀಡಿದೆ.
ಆದರೆ, ವಾಣಿಜ್ಯ ಚಟುವಟಿಕೆ ನಡೆಸುವುವರಿಗೆ ನೋಟಿಸ್ ನೀಡಲಿ.ದಿನನಿತ್ಯ ಬಳಕೆಯ ಪದಾರ್ಥಗಳು, ಆಹಾರ ಪದಾರ್ಥ ಮಾರಾಟ ಮಾಡುವ ನಮ್ಮಂತಹ ಸಣ್ಣ ವ್ಯಾಪಾರ ಮಾಡುವ ಅಂಗಡಿಗಳನ್ನು ಮುಚ್ಚಿಸುವುದು ಸರಿಯಲ್ಲ ಎಂದು ಹೇಳಿದರು.
ನಮ್ಮನ್ನು ಖಾಲಿ ಮಾಡಿಸಿದರೆ ಇದನ್ನೇ ನಂಬಿಕೊಂಡಿರುವ ನಾವು ಬೀದಿಪಾಲಾಗುತ್ತೇವೆ ಎಂದು ಅಳಲು ತೋಡಿಕೊಂಡ ವ್ಯಾಪಾರಿಗಳು, ಸರ್ಕಾರ ನಮಗೆ ಜೀವನೋಪಾಯಕ್ಕೆ ಬೇರೆ ವ್ಯವಸ್ಥೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಸರ್ಕಾರ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು.ಇಲ್ಲದಿದ್ದರೆ ನಾವು ರೈತರಂತೆ ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಅಂಗಡಿಗಳನ್ನು ನಡೆಸಲು ಕೊಠಡಿಗಳನ್ನು ಬಾಡಿಗೆಗೆ ಪಡೆದು ಬಾಡಿಗೆ ಕೊಟ್ಟು ನಿಭಾಯಿಸುವುದು ನಮಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಾವು ಬೀದಿ ಬದಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದೇವೆ. ವಾಣಿಜ್ಯ ಚಟುವಟಿಕೆ ನಡೆಸುವವರನ್ನು ಖಾಲಿ ಮಾಡಿಸಲಿ.ನಮ್ಮನ್ನು ನಮ್ಮ ಪಾಡಿಗೆ ಬಿಡಲಿ.ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ.ಈ ವಿಚಾರದಲ್ಲಿ ಕೂಡಲೇ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಇಂದಿರಾನಗರ ಒಂದನ್ನೇ ಬಿಬಿಎಂಪಿ ಏಕೆ ಟಾರ್ಗೆಟ್ ಮಾಡಿದೆಯೋ ತಿಳಿಯದು.ಅಂಗಡಿ, ಮಳಿಗೆಗಳನ್ನು ಮುಚ್ಚಿಸುವುದಾದರೆ ಇಡೀ ನಗರದಲ್ಲೆ ಮುಚ್ಚಿಸಲಿ.ಒಂದೊಂದು ಬಡಾವಣೆಗೆ ಒಂದೊಂದು ನೀತಿ ಅನುಸರಿಸುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ವಿನಯ್ಕುಮಾರ್, ಸತ್ಯನಾರಾಯಣ್, ಪೆರವಿಲ್ ಮತ್ತಿತರರು ಉಪಸ್ಥಿತರಿದ್ದರು.