ಬೆಂಗಳೂರು,ಜ.11- ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಕೇಂದ್ರದ ಮಾಜಿ ಸಚಿವ ಎಚ್.ಎನ್.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್, ಮಾಜಿ ಸಚಿವ ಚಲುವರಾಯಸ್ವಾಮಿ, ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ಗೌಡ ಸೇರಿದಂತೆ ಘಟಾನುಘಟಿ ನಾಯಕರನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.
ದೆಹಲಿಯಲ್ಲಿ ಇಂದಿನಿಂದ ಎರಡು ದಿನ ಕಾಲ ರಾಷ್ಟ್ರೀಯ ಅಧಿವೇಶನ ನಡೆಯುತ್ತಿದೆ. 13 ಮತ್ತು 14ರಂದು ಲೋಕಸಭಾ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಕರ್ನಾಟಕದ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರಿಗೆ ಸಮಯವನ್ನು ನಿಗದಿಪಡಿಸಲಾಗಿದೆ.
ಈಗಾಗಲೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವರು ವರಿಷ್ಟರ ಕೈಗೆ ಈ ಪಟ್ಟಿಯನ್ನು ಹಸ್ತಾಂತರ ಮಾಡಲಿದ್ದಾರೆ.
ಉಡುಪಿ-ಚಿಕ್ಕಮಗಳೂರು ಹೊರತುಪಡಿಸಿ ಉಳಿದಿರುವ ಹಾಲಿ ಎಲ್ಲ ಸಂಸದರಿಗೆ ಟಿಕೆಟ್ ಸಿಗುವುದು ಖಾತರಿಯಾಗಿದೆ. ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ್ ಕೋರೆ ಕೂಡ ಚಿಕ್ಕೋಡಿ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಬೆಳಗಾವಿಯಲ್ಲಿ ಸತತ ಮೂರು ಬಾರಿ ಗೆದ್ದಿರುವ ಸುರೇಶ್ ಅಂಗಡಿ ಗೆಲ್ಲುವ ಸಾಮಥ್ರ್ಯ ಹೊಂದಿರುವುದರಿಂದ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳಿಲ್ಲ. ಮಾಜಿ ಸಚಿವ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಚಿಕ್ಕೋಡಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಕಾಶ್ ಹುಕ್ಕೇರಿ ಎದುರು ಕೆಲವೇ ಕೆಲವು ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇಲ್ಲಿ ಉಮೇಶ್ ಕತ್ತಿ ಮತ್ತು ಕಾಂಗ್ರೆಸ್ನಿಂದ ಸಿಡಿದೆದ್ದಿರುವ ರಮೇಶ್ ಜಾರಕಿಹೊಳಿ ಪ್ರಭಾವ ಸಾಕಷ್ಟಿರುವುದರಿಂದ ರಮೇಶ್ ಕತ್ತಿ ಇಲ್ಲ ವೇ ಪ್ರಭಾಕರ್ ಕೋರೆ ಅಭ್ಯರ್ಥಿಯಾಗಬಹುದು.
ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದರಿಂದ ಇದೀಗ ಎಚ್ಚರಿಕೆಯ ಹೆಜ್ಜೆ ಇಡಲಾಗಿದೆ. ಗಣಿ ಜಿಲ್ಲೆಯಿಂದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪನವರ ಪುತ್ರ, ಕಾಂಗ್ರೆಸ್ನಲ್ಲಿ ಮುನಿಸಿಕೊಂಡು ಬಿಜೆಪಿ ಕದ ತಟ್ಟುತ್ತಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಸಹೋದರ ಬಿ.ಪ್ರಸಾದ್ ಹೆಸರುಗಳು ಚಾಲ್ತಿಯಲ್ಲಿವೆ.
ರಾಯಚೂರನಿಂದ ಹಾಲಿ ಸಂಸದ ಬಿ.ವಿ.ನಾಯಕ್ ಕೂಡ ಇತ್ತೀಚೆಗೆ ನವದೆಹಲಿಯಲ್ಲಿ ಯಡಿಯೂರಪ್ಪನವರ ಜೊತೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಚುನಾವಣಾ ವೇಳೆ ಬಿ.ವಿ.ನಾಯಕ್ ಬಿಜೆಪಿಗೆ ಬಂದರೆ ಬಹುತೇಕ ಅವರೇ ಅಭ್ಯರ್ಥಿಯಾಗುವ ಸಂಭವವಿದೆ. ಇಲ್ಲದಿದ್ದರೆ ದೇವದುರ್ಗದ ಶಾಸಕ ಶಿವನಗೌಡ ನಾಯಕ್, ಮಾಜಿ ಸಂಸದ ಸಣ್ಣ ಫಕೀರಪ್ಪ ಕಣಕ್ಕಿಳಿಯುವುದು ಖಚಿತ.
ದಾವಣಗೆರೆಯಲ್ಲೂ ಈ ಬಾರಿ ಬಿಜೆಪಿ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಸಕ್ರೀಯ ರಾಜಕಾರಣದ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಹೀಗಾಗಿ ಬಿಜೆಪಿಯು ಮಾಜಿ ಸಚಿವ ದಾವಣಗೆರೆಯ ಧಣಿಯ ಪುತ್ರ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ಗೆ ಗಾಳ ಹಾಕಿದೆ.
ಒಂದು ವೇಳೆ ಸಿದ್ದೇಶ್ವರ್ ಕಣದಿಂದ ಹಿಂದೆ ಸರಿದರೆ ಎಸ್.ಎಸ್.ಮಲ್ಲಿಕಾರ್ಜುನ್ ಬಿಜೆಪಿಯ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಸೋಲಿಲ್ಲದ ಸರದಾರನೆಂದೇ ರಾಜಕೀಯ ವಲಯದಲ್ಲಿ ಖ್ಯಾತಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಈ ಗಾಗಲೇ ಮಾತುಕತೆಯೂ ನಡೆದಿದೆ ಎನ್ನಲಾಗಿದೆ.
ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಬಿಜೆಪಿಯಿಂದ ಕಣಕ್ಕಿಳಿಸಲು ಮಾಜಿ ಸಚಿವ ಚಲುವರಾಯಸ್ವಾಮಿ ಅವರಿಗೆ ಗಾಳ ಹಾಕಿದೆ. ಆದರೆ ಜಿಲ್ಲೆಯಲ್ಲಿ ಬಿಜೆಪಿ ಪ್ರಭಾವ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುವಂತಿರುವುದರಿಂದ ಕಮಲ ಕೈ ಹಿಡಿಯಲು ಚಲುವರಾಯಸ್ವಾಮಿ ಮೀನಾಮೇಷ ಎಣಿಸುತ್ತಿದ್ದಾರೆ.
ಒಂದು ವೇಳೆ ಚಲುವರಾಯಸ್ವಾಮಿ ಬಾರದಿದ್ದರೆ ಜೆಡಿಎಸ್ನಲ್ಲಿರುವ ಲಕ್ಷ್ಮಿ ಅಶ್ವಿನ್ಗೌಡ ಅವರನ್ನು ಸೆಳೆಯಲು ಬಿಜೆಪಿ ಶತಪ್ರಯತ್ನ ನಡೆಸಿದೆ.ಗಡಿ ಜಿಲ್ಲೆ ಚಾಮರಾಜನಗರದಿಂದ ಮಾಜಿ ಸಚಿವ ಎಂ.ಶಿವಣ್ಣ ಸೇರಿದಂತೆ ಮತ್ತಿತರ ಹೆಸರು ಕೇಳಿಬಂದಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಯ ಅಮಿತ್ ಷಾ ಕಚೇರಿಗೆ ಕಳುಹಿಸಿದ್ದಾರೆ.
ಇನ್ನು ಜನವರಿ ಕೊನೆ ವಾರದಲ್ಲಿ 543 ಲೋಕಸಭಾ ಕ್ಷೇತ್ರಗಳ ಪೈಕಿ 200 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದ್ದು, ರಾಜ್ಯದಲ್ಲೂ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.
ಜೆಡಿಎಸ್ ಕಾಂಗ್ರೆಸ್ ತೆಕ್ಕೆಯಲ್ಲಿರುವ ಕ್ಷೇತ್ರಗಳಿಗೆ ತಲಾ ಮೂರ್ನಾಲ್ಕು ಮಂದಿ ಹೊಸ ಅಭ್ಯರ್ಥಿಗಳ ಹೆಸರನ್ನು ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.ಮತ್ತೊಂದು ಪ್ರಮುಖ ವಿಚಾರವೆಂದರೆ ಹಾಲಿ 5 ಮಂದಿ ಸಂಸದರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಾಯಕರೇ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದ್ದರೂ ಯಡಿಯೂರಪ್ಪ ಮಾತ್ರ ತಮಗೇನು ಗೊತ್ತಿಲ್ಲದ ರೀತಿಯಲ್ಲಿ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.
ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಗಳು?
1. ಚಿಕ್ಕೋಡಿ-ಸದಲಗಾ -ರಮೇಶ್ ವಿಶ್ವನಾಥ್ ಕತ್ತಿ/ ಪ್ರಭಾಕರ್ ಕೋರೆ
2. ಬೆಳಗಾವಿ -ಸುರೇಶ್ ಅಂಗಡಿ
3. ಬಾಗಲಕೋಟೆ -ಪಿ.ಸಿ.ಗದ್ದೀಗೌಡರ್ (ಹಾಲಿ ಸಂಸದ)
4. ವಿಜಯಪುರ -ರಮೇಶ್ ಜಿಗಜಿಣಗಿ (ಹಾಲಿ ಸಂಸದ)
5. ಕಲ್ಬುರ್ಗಿ – ಕೆ. ರತ್ನಪ್ರಭಾ( ನಿವೃತ್ತ ಸಿಎಸ್)
6. ರಾಯಚೂರು -ಕೆ.ಶಿವನಗೌಡ ನಾಯಕ್ (ಶಾಸಕ) / ಸಣ್ಣ ಫಕೀರಪ್ಪ(ಮಾಜಿ ಸಂಸದ).
7. ಕೊಪ್ಪಳ -ಕರಡಿ ಸಂಗಣ್ಣ( ಹಾಲಿ ಸಂಸದ)
8. ಬಳ್ಳಾರಿ -ಜೆ. ಶಾಂತಾ(ಮಾಜಿ ಸಂಸದೆ)/ಸುರೇಶ್ ಬಾಬು(ಮಾಜಿ ಶಾಸಕ)/ಬಿ. ನಾಗೇಂದ್ರ(ಶಾಸಕ -ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಕರೆತರುವ ಪ್ಲಾನ್)/ ವೆಂಕಟೇಶ್ ಪ್ರಸಾದ್ (ಶಾಸಕ ಬಿ. ನಾಗೇಂದ್ರರ ಸಹೋದರ).
9. ಹಾವೇರಿ-ಗದಗ -ಶಿವಕುಮಾರ್ ಚನ್ನಬಸಪ್ಪ ಉದಾಸಿ (ಹಾಲಿ ಸಂಸದ)
10. ಧಾರವಾಡ -ಪ್ರಹ್ಲಾದ್ ಜೋಷಿ(ಹಾಲಿ ಸಂಸದ)
11. ಉತ್ತರ ಕನ್ನಡ -ಅನಂತಕುಮಾರ್ ಹೆಗಡೆ(ಹಾಲಿ ಸಂಸದ)
12. ದಾವಣಗೆರೆ -ಜಿ.ಎಂ. ಸಿದ್ದೇಶ್ವರ್ (ಹಾಲಿ ಸಂಸದ)/ ಎಸ್.ಎಸ್. ಮಲ್ಲಿಕಾರ್ಜುನ್ (ಮಾಜಿ ಸಚಿವ, ಆಪರೇಷನ್ ಕಮಲ)
13. ಶಿವಮೊಗ್ಗ -ಬಿ.ವೈ. ರಾಘವೇಂದ್ರ (ಹಾಲಿ ಸಂಸದ)
14.ಉಡುಪಿ-ಚಿಕ್ಕಮಗಳೂರು -ಕು. ಶೋಭಾ ಕರಂದ್ಲಾಜೆ (ಹಾಲಿ ಸಂಸದೆ)/ಜಯಪ್ರಕಾಶ್ ಹೆಗಡೆ
15. ಹಾಸನ -ತೇಜಸ್ವಿನಿ ರಮೇಶ್ಗೌಡ (ಹಾಲಿ ವಿಧಾನಪರಿಷತ್ ಸದಸ್ಯೆ)/ ಆರ್. ವಿಜಯಶಂಕರ್(ಮಾಜಿ ಸಚಿವ. ಆಪರೇಷನ್ ಕಮಲ)
16. ಚಿತ್ರದುರ್ಗ -ಮಾದಾರ ಚೆನ್ನಯ್ಯ ಸ್ವಾಮೀಜಿ (ಮಾದಾರ ಪೀಠ)/ ಜೆ. ಜನಾರ್ದನ ಸ್ವಾಮಿ(ಮಾಜಿ ಸಂಸದ).
17.ತುಮಕೂರು ಸುರೇಶ್ ಗೌಡ (ಮಾಜಿ ಶಾಸಕ)/ಜಿ.ಎಸ್. ಬಸವರಾಜು (ಮಾಜಿ ಸಂಸದ)
18. ಮಂಡ್ಯ -ಲಕ್ಷ್ಮೀ ಅಶ್ವಿನ್ಗೌಡ (ಸ್ಥಳೀಯ ಜೆಡಿಎಸ್ ಮುಖಂಡೆ. ಆಪರೇಷನ್ ಕಮಲ)/ ಚೆಲುವರಾಯಸ್ವಾಮಿ (ಮಾಜಿ ಸಚಿವ, ಆಪರೇಷನ್ ಕಮಲ)/ ಡಾ.ಸಿದ್ಧರಾಮಯ್ಯ(ಉಪಚುನಾವಣೆಯ ಪರಾಜಿತ ಅಭ್ಯರ್ಥಿ)
19.ಮೈಸೂರು -ಪ್ರತಾಪ್ ಸಿಂಹ(ಹಾಲಿ ಸಂಸದ)
20. ಚಾಮರಾಜನಗರ – ಎಂ.ಶಿವಣ್ಣ/ ಎ.ಆರ್. ಕೃಷ್ಣಮೂರ್ತಿ (2014 ರ ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ).
21. ಬೆಂಗಳೂರು ಗ್ರಾಮಾಂತರ -ಮಾಗಡಿ ಬಾಲಕೃಷ್ಣ (ಮಾಜಿ ಶಾಸಕ, ಆಪರೇಷನ್ ಕಮಲ)/ಆರ್.ಅಶೋಕ್(ಮಾಜಿ ಡಿಸಿಎಂ – ಹಾಲಿ ಶಾಸಕ)
22. ಬೆಂಗಳೂರು ಉತ್ತರ -ಡಿ.ವಿ. ಸದಾನಂದ ಗೌಡ (ಹಾಲಿ ಸಂಸದ)
23. ಬೆಂಗಳೂರು ಕೇಂದ್ರ -ಪಿ.ಸಿ. ಮೋಹನ್ (ಹಾಲಿ ಸಂಸದ)
24. ಬೆಂಗಳೂರು ದಕ್ಷಿಣ -ಡಾ.ತೇಜಸ್ವಿನಿ ಅನಂತಕುಮಾರ್ (ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಪತ್ನಿ)
25. ಚಿಕ್ಕಬಳ್ಳಾಪುರ -ಬಿ.ಎನ್. ಬಚ್ಚೇಗೌಡ (ಮಾಜಿ ಸಚಿವ)/ಶರತ್ ಬಚ್ಚೇಗೌಡ (ಮಾಜಿ ಸಚಿವ ಬಚ್ಚೇಗೌಡರ ಪುತ್ರ)
26. ಕೋಲಾರ -ಡಿ.ಎಸ್. ವೀರಯ್ಯ( ವಿಧಾನ ಪರಿಷತ್ ಸದಸ್ಯ)/ಎಂ ನಾರಾಯಣಸ್ವಾಮಿ (2014ರ ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ)
27. ಬೀದರ್ -ಭಗವಂತ ಖೂಬಾ (ಹಾಲಿ ಸಂಸದ)
28. ದಕ್ಷಿಣ ಕನ್ನಡ -ನಳಿನ್ಕುಮಾರ್ ಕಟೀಲು (ಹಾಲಿ ಸಂಸದ).