ದುಬಾರಿಯಾದ ಟೊಮೆಟೊ ಮತ್ತು ತರಕಾರಿಗಳ ಬೆಲೆ

ಬೆಂಗಳೂರು,ಜ.11- ಹಾಪ್ ಕಾಮ್ಸ್ ನಲ್ಲಿ ಸಿಕ್ಕಿದ ತರಕಾರಿ ಬೆಲೆ ಪಟ್ಟಿಯಂತೆ, ಟೊಮೆಟೊ ಬೆಲೆ ನಿನ್ನೆ ಪ್ರತಿ ಕೆಜಿಗೆ 58 ರೂಪಾಯಿಯಿದೆ. ಹೊರಗೆ ಚಿಲ್ಲರೆ ಮಾರಾಟಗಾರರು 70 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಡಿಸೆಂಬರ್ ಆರಂಭದಲ್ಲಿ ಕೆಜಿಗೆ 20 ರೂ.ಇದ್ದ ಟೊಮೆಟೊ ಬೆಲೆ ಇಂದು 70 ರೂಗೆ ಏರಿಕೆಯಾಗಿದೆ. ಪೂರೈಕೆ ಕಡಿಮೆ ಬಳಕೆ ಹೆಚ್ಚಾದಾಗ ಸಹಜವಾಗಿ ಬೆಲೆ ಹೆಚ್ಚಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಈ ವರ್ಷ ಪ್ರತಿಕೂಲ ಹವಾಮಾನ, ಕೊಳೆಬಾಧೆ ರೋಗದಿಂದ ಟೊಮೆಟೊ ಬೆಳೆ ಇಳುವರಿ ಕಡಿಮೆಯಾಗಿದ್ದರಿಂದ ಪೂರೈಕೆ ಕಡಿಮೆಯಾಗಿದೆ.ಜನವರಿ ಕೊನೆ ಅಥವಾ ಫೆಬ್ರವರಿ ಹೊತ್ತಿಗೆ ಬೆಲೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿದೆ ಎನ್ನುತ್ತಾರೆ.

ರಸಮ್, ಸಾಂಬಾರ್ ಸೇರಿದಂತೆ ಎಲ್ಲಾ ರೀತಿಯ ಖಾದ್ಯ ರ ತಯಾರಿಸಲು ಟೊಮೆಟೊ ಅತ್ಯವಶ್ಯಕ. ನಮ್ಮ ಮನೆ ಹತ್ತಿರ ಈಗಾಗಲೇ ಕೆಜಿಗೆ 64 ರೂ. ಕೊಟ್ಟು ಟೊಮೊಟೊ ಖರೀಸುವಂತಾಗಿದೆ.ಕಳೆದ ತಿಂಗಳು 18 ರೂ.ಗೆ ಸಿಗುತ್ತಿತ್ತು. ಸಂಕ್ರಾಂತಿ ಹೊತ್ತಿಗೆ ಇನ್ನಷ್ಟು ಹೆಚ್ಚಾದರೆ ಹಬ್ಬದ ಅಡುಗೆಗೂ ಇದರ ಬಿಸಿ ತಟ್ಟಲಿದೆ ಎಂಬುದು ನಿವಾಸಿಯೊಬ್ಬರು ಹೇಳುತ್ತಾರೆ.

ಕೇವಲ ಟೊಮೆಟೊ ಮಾತ್ರವಲ್ಲದೆ ಬೇರೆ ತರಕಾರಿಗಳ ಬೆಲೆ ಕೂಡ ದುಬಾರಿಯಾಗಿದೆ.ನುಗ್ಗೆಕಾಯಿಗೆ ಕೆಜಿಗೆ 140 ರೂ.ಗಳಷ್ಟಾಗಿದೆ. ಬೀನ್ಸ್, ದೊಡ್ಡ ಮೆಣಸಿನಕಾಯಿ, ಕೋಸು, ಕ್ಯಾರೆಟ್ ಸಹ ಬೆಲೆ ಹೆಚ್ಚಾಗಿರುವುದರಿಂದ ತರಕಾರಿ ಕೊಳ್ಳಲು ಹಿಂದೆಮುಂದೆ ನೋಡುವಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ