ಬೆಂಗಳೂರು, ಜ.11- ನಗರದ ಗಾಂಧಿಭವನದಲ್ಲಿ ಹಿರಿಯ ಪತ್ರಕರ್ತ ಹಾಗೂ ಮಾಜಿ ಸಂಸದ ಪಾಟೀಲ ಪುಟ್ಟಪ್ಪ ಅವರ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಸವ ಸಮಿತಿ, ಡಾ.ನಾಡೋಜ ಪಾಟೀಲ ಪುಟ್ಟಪ್ಪ ಜನ್ಮಶತಮಾನೋತ್ಸವ ಸಮಿತಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಯುಕ್ತವಾಗಿ ಆಯೋಜಿಸಿದ್ದ ಪಾಟೀಲ ಪುಟ್ಟಪ್ಪ ಅವರ ಜನ್ಮ ಶತಮಾನೋತ್ಸವದಲ್ಲಿ ಮಹಾತ್ಮಗಾಂಧಿಜೀ ಅವರ ಆದರ್ಶಗಳ ಮಂಥನ ನಡೆಯಿತು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗೈರು ಹಾಜರಿಯಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾದ ವೆಂಕಟರಾವ್ ನಾಡಗೌಡ ಅವರು ಮುಖ್ಯಮಂತ್ರಿ ಅವರ ಶುಭ ಸಂದೇಶವನ್ನು ಸಭೆಗೆ ಓದಿ ಹೇಳಿದರು.
ಸಂದೇಶದಲ್ಲಿ ಮುಖ್ಯಮಂತ್ರಿ ಅವರು ಪಾಟೀಲಪುಟ್ಟಪ್ಪ ಅವರ ಸಾಧನೆಗಳನ್ನು ಕೊಂಡಾಡಿದರು.
ನಾಡಿನ ಹಿರಿಯ ಚೇತನರಲ್ಲಿ ಪಾಪು ಒಬ್ಬರು. ಪಾಪು ಚಿಕ್ಕ ಹುಡುಗನಾಗಿದ್ದಾಗ ಮಹಾತ್ಮಗಾಂಧಿ ಅವರು ಹಾವೇರಿ ಜಿಲ್ಲೆ ಬ್ಯಾಡಗಿಗೆ ಭೇಟಿ ನೀಡಿದ್ದರು.ಆ ವೇಳೆ ಗಾಂಧೀಜಿ ಅವರು ಪಾಪು ಅವರ ಬೆನ್ನು ತಟ್ಟಿದ್ದರು.ಅಂದಿನಿಂದ ಪಾಪು ಅವರು ಗಾಂಧೀಜಿಯ ಆದರ್ಶಗಳನ್ನು ಮೈಗೂಡಿಸಿಕೊಂಡರು.ತಾನು ನಂಬಿದ ತತ್ವ ಸಿದ್ದಾಂತದ ಅನುಸರಣೆಯಲ್ಲಿ ಎಂದು ರಾಜಿಯಾಗಿಲ್ಲ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಪಾಪು ಮಾಡಿದ ಕೆಲಸದಿಂದಲೇ ಇವತ್ತು ಆಡಳಿತದಲ್ಲಿ ಕನ್ನಡ ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಕನ್ನಡದ ವಿಷಯದಲ್ಲಿ ಪಾ.ಪು. ಅವರದು ದಿಟ್ಟ ನಿಲುವು.ರಾಜ್ಯಪಾಲರು, ಮುಖ್ಯಮಂತ್ರಿ, ಪ್ರಭಾವಿ ಸಚಿವರು ಸೇರಿದಂತೆ ಯಾರನ್ನು ನೋಡದೆ ಮುಲ್ಲಾಜಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದರು. ಕನ್ನಡಕ್ಕಾಗಿ ಎಂತಹವರನ್ನಾದರೂ ಎದುರಿಸಬಲ್ಲರು ಎಂಬುದು ಜನ ಜನಿತವಾಗಿವಾಗಿದೆ ಎಂದಿದ್ದಾರೆ.
ಕನ್ನಡದ ಉಳಿವಿಗಾಗಿ ಪಾಪು 10 ಸಾವಿರಕ್ಕೂ ಹೆಚ್ಚು ಪತ್ರ ಬರೆದಿದ್ದಾರೆ ಎಂದರೆ ಅವರ ಕನ್ನಡ ಪ್ರೇಮ ಎಂತಹದ್ದು ಎಂದು ಗೊತ್ತಾಗಲಿದೆ.
ಪ್ರಪಂಚ, ವಿಶ್ವವಾಣಿ ಸೇರಿದಂತೆ ಪಾಪು ಹಲವಾರು ಪತ್ರಿಕೆಗಳನ್ನು ಹುಟ್ಟು ಹಾಕಿದರು.ನಿಷ್ಠುರ, ತೂಕದ ಬರವಣಿಗೆ ಮೂಲಕ ನಾಡಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದಾರೆ.ಮೊನಚು ಭಾಷಣದ ಪ್ರಾವೀಣ್ಯತೆ ಅವರದು ಎಂದಿದ್ದಾರೆ.
ಸ್ವಾತಂತ್ರ ಹೋರಾಟಗಾರರಾಗಿ, ರಾಜ್ಯಸಭೆ ಸದಸ್ಯರಾಗಿ, ಪತ್ರಕರ್ತರಾಗಿ ಎಲ್ಲ ಕ್ಷೇತ್ರಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡರು.ಗೋಕಾಕ್, ಕ್ವಿಟ್ ಇಂಡಿಯಾ ಸೇರಿ ಹಲವಾರು ಚಳವಳಿಗಳಲ್ಲಿ ಭಾಗವಹಿಸಿದ್ದರು ಎಂದು ಮುಖ್ಯಮಂತ್ರಿ ಅವರು ಸ್ಮರಿಸಿಕೊಂಡ ಲಿಖಿತ ಸಂದೇಶವನ್ನು ಸಚಿವರು ವೇದಿಕೆಯಲ್ಲಿ ಓದಿದರು.
ವಿಧಾನ ಪರಿಷತ್ನ ಮಾಜಿ ಸಭಾಪತಿ ಬಿ.ಎಲï.ಶಂಕರ್, ಜಿಲ್ಲೆಯಲ್ಲಿ ಸಮುದಾಯ ಭವನಕ್ಕೆ ಮೀಸಲಿಟ್ಟ ಹಣದಲ್ಲಿ ಜಿಲ್ಲೆಗೊಂದರಂತೆ ಮ್ಯೂಸಿಯಂ ಮಾಡಲು ಸರ್ಕಾರಕ್ಕೆ ಸಲಹೆ ನೀಡಿದರು. ಪ್ರತಿಯೊಂದು ಜಿಲ್ಲೆಯಲ್ಲೂ ಸಾಹಿತ್ಯ, ಕೃಷಿ, ಸ್ವಾತಂತ್ರ್ಯ ಹೋರಾಟ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕರಿದ್ದಾರೆ.ಎಲ್ಲರ ಜೀವನ ಚರಿತ್ರೆಯನ್ನು ಮ್ಯೂಸಿಯಂನಲ್ಲಿ ಪ್ರಚಾರ ಪಡಿಸಬೇಕು.ಎಲ್ಲರ ಜನ್ಮದಿನಾಚರಣೆಯನ್ನು ಒಂದೇ ದಿನ ಹಬ್ಬದ ಮಾದರಿಯಲ್ಲಿ ಆಚರಿಸಬೇಕು ಎಂದು ಸಲಹೆ ನೀಡಿದರು.
ದೇಶ ಗಾಂಧಿಜೀ ಅವರ ನೂರೈವತ್ತನೆ ಜನ್ಮದಿನಾಚರಣೆಯನ್ನು ಆಚರಿಸುತ್ತಿದೆ. ರಾಜ್ಯ ಸರ್ಕಾರ ಸುವರ್ಣ ಕರ್ನಾಟಕದ ಆಚರಣೆಯಲ್ಲಿ ಮುದ್ರಿತ ಎಲ್ಲ ಸಾಮಗ್ರಿಗಳ ಮೇಲೆ ಸುವರ್ಣ ಕರ್ನಾಟಕ ಎಂದು ಬರೆಸಲಾಗುತ್ತಿತ್ತು. ಈಗ ಅದೇ ಮಾದರಿಯಲ್ಲಿ ಗಾಂಧಿ 150 ಎಂದು ನಮೂದಿಸುವಂತೆ ಸಲಹೆ ಮಾಡಿದರು.
ಪಾಟೀಲ ಪುಟ್ಟಪ್ಪ ಅವರು ಮಾತನಾಡಿ, ನಾನು ಮೊದಲಿನಿಂದ ಗಾಂಧಿವಾದಿ.ಬ್ಯಾಡಗಿಯಲ್ಲಿ ಓದುವಾಗ ಗಾಂಧಿಜೀ ಅವರನ್ನು ಭೇಟಿ ಮಾಡಿದ್ದೆ, ಅಂದಿನಿಂದ ಖಾದಿ ತೊಡುವುದಾಗಿ ಪ್ರತಿಜ್ಞೆ ಮಾಡಿದ್ದೆ.ಇಂದಿಗೂ ಅದನ್ನೇ ತೊಡುತ್ತಿದ್ದೇನೆ. ಖಾದಿ ಅಲ್ಲದೆ ಬೇರೆ ವಸ್ತ್ರ ಕೊಟ್ಟರೆ ಬಟ್ಟೆ ತೊಡದೆ ಬೆತ್ತಲೆ ಇರುತ್ತೇನೆ ಎಂದು ಎಚ್ಚರಿಕೆ ನೀಡಿದ್ದೆ.ಶಾಲೆಯಲ್ಲಿ ನನ್ನ ಬೆದರಿಕೆಗೆ ಅಂಜಿ ಗಾಂಧಿ ವಸ್ತ್ರ ಕೊಟ್ಟರು.
ಅಮೆರಿಕಾಗೆ ಹೋದಾಗಲೂ ಗಾಂಧಿ ಟೋಪಿಯನ್ನು ತೊಡುತ್ತಿದ್ದೆ ಎಂದು ಸ್ಮರಿಸಿಕೊಂಡರು.
ನಮ್ಮ ಗುರುಗಳಾದ ಗಂಗಾಧರ ಸವದತ್ತಿ ಅವರು ತಾವು ಕಲಿತ್ತಿದ್ದನ್ನು ಮಕ್ಕಳಿಗೆ ಕಲಿಸಿದ್ದರು.ನಾನು ಅವರಿಂದ ಕಲಿತ್ತಿದ್ದನ್ನು ಜೀವನದ್ದುದ್ದಕ್ಕೂ ಅಳವಡಿಸಿಕೊಂಡೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೋ.ರು.ಚೆನ್ನ ಬಸಪ್ಪ ಅವರು ಮಾತನಾಡಿ, ರಾಜ್ಯಕ್ಕೆ ಯಾವ ಸರ್ಕಾರವೇ ಬರಲಿ ಪಾಪು ಅವರ ಉಸಿರು ಕನ್ನಡ.ಕನ್ನಡದ ಪ್ರತಿನಿಧಿಯಾದ ಅವರ ಜೊತೆ ಇರುವುದೇ ಅಪೂರ್ವ ಅನುಭವ. ಸಿಟ್ಟಿನಲ್ಲಿದ್ದಾಗ ಅವರ ಎದುರು ನಿಲ್ಲುವುದು ಕಷ್ಟ.ನೂರು ದಾಟಿದವರು ಅನೇಕರಿದ್ದಾರೆ, ಆದರೆ ಪಾಪು ಅವರಂತೆ ತಮ್ಮ ಜೀವನದಲ್ಲಿ ಕಷ್ಟ ನಷ್ಟ ಸಹಿಸಿಕೊಂಡು ಸಾಧನೆ ಮಾಡಿದವರು ವಿರಳ ಎಂದರು.
ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಮಾತನಾಡಿ, ಮುಂದಿನ ಪೀಳಿಗೆ ಪಾಪು ಅವರಂತಹ ಮಾಹಾತ್ಮರ ಜೀವನವನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದರು.
ಜನ್ಮಶತಮಾನೋತ್ಸವ ಸಮಿತಿಯ ಸಂಚಾಲಕರಾದ ಲೋಹಿತ್ ನಾಯ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಇದೇ ತಿಂಗಳ 14ರಂದು ಪಾಪು ಅವರಿಗೆ ನೂರು ವರ್ಷï ತುಂಬಲಿದೆ. ಅದರ ಅಂಗವಾಗಿ ಕಾಸರಗೋಡು, ದೆಹಲಿ, ಧಾರವಾಡದಲ್ಲಿ ಸೇರಿದಂತೆ ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಪಾಪು ವ್ಯಕ್ತಿ, ಶಕ್ತಿ ಎಂಬ ಆತ್ಮಚರಿತ್ರೆ ಬಿಡುಗಡೆ ಮಾಡಲಾಗುತ್ತಿದೆ.ಆರು ಕಡೆ ವಿಚಾರ ಸಂಕಿರಣಗಳು ನಡೆಯಲಿದ್ದು, ಈಗಾಗಲೇ ಎರಡು ಕಡೆ ಕಾರ್ಯಕ್ರಮ ಪೂರ್ಣಗೊಂಡಿದೆ ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ವೋಡೆ ಪಿ ಕೃಷ್ಣ ಸ್ವಾಗತಿಸಿದರು. ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ಮಾಜಿ ಸಂಸದ ಎಚ್ಹನುಮಂತಪ್ಪ, ವಿಶ್ರಾಂತ ಕುಲಪತಿ ಮಹದೇವಪ್ಪ, ಶಿಕ್ಷಣ ತಜ್ಞ ಕೆ.ಇ.ರಾಧಕೃಷ್ಣ,ಮಾಜಿ ಸಂಸದ ಪೆÇ್ರ.ಐ.ಜಿ.ಸನದಿ, ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿಯವರಾದ ಇಂದಿರಾ ಕೃಷ್ಣಪ್ಪ, ಬಸಂತಕುಮಾರ್ ಪಾಟೀಲï, ಸಿದ್ದಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.