
ಬೆಂಗಳೂರು,ಜ.11-ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿಯ ಅಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ನಿರ್ಧರಿಸಿದ್ದಾರೆ. ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಈಗಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಕೆಲಸ ಸಿಗಲು ಸಾಧ್ಯ ಎಂದು ಸಮರ್ಥನೆ ನೀಡುವ ಮೂಲಕ ಕನ್ನಡ ಕೊನೆಗಾಣಿಸಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಾದೇಶಿಕ ಪಕ್ಷವಾಗಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿಗಳು ನಾಡಿನ ಹಿತ ಕಾಯದೇ ಕನ್ನಡ ಭಾಷೆ ಬೆಳೆಸುವಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಮಹತ್ವ ಅರಿಯದೇ ಏಕಾಏಕಿ ಇಂಗ್ಲೀಷ್ ಮಾಧ್ಯಮ ಶಾಲೆ ತೆರೆಯುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.
ಕನ್ನಡಿಗರಿಗೆ ಉದ್ಯೋಗಾವಕಾಶ ಮತ್ತು ಭದ್ರತೆ ನೀಡುವ ಡಾ.ಸರೋಜಾ ಮಹಿಷಿ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು. 1ರಿಂದ 10ನೇ ತರಗತಿವರೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಸರಕಾರದಲ್ಲಿ ಉದ್ಯೋಗ ಸಿಗಬೇಕು ಎಂಬ ಕಾನೂನು ಜಾರಿಗೆ ತಂದರೆ ಕನ್ನಡ ಶಾಲೆಗಳು ಉಳಿಯಬಹುದು ಎಂದು ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದಲ್ಲಿ ಜಾರಿಗೊಳಿಸಿರುವ ಹಾಗೆ ಕನ್ನಡಿಗರಿಗೆ ಮತ್ತು ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ಮತ್ತು ಎಲ್ಲಾ ರಂಗದಲ್ಲೂ ಶೇ.19ರಷ್ಟು ಮೀಸಲಾತಿ ನೀಡಬೇಕು.ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಕಡ್ಡಾಯಗೊಳಿಸಬೇಕು.ಜನ ಪ್ರತಿನಿಧಿಗಳ ಮಕ್ಕಳು ಸರಕಾರಿ ಶಾಲೆಗಳಲ್ಲಿ ಓದುವಂತೆ ಕಾನೂನು ರೂಪಿಸಬೇಕು. ರಾಜ್ಯದಲ್ಲಿ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿ ಏಕರೂಪ ಶಿಕ್ಷಣ ಜಸರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.