ಮೆಟ್ರೋ ರೈಲಿನಿಂದ ಜಿಗಿದು ಆತ್ನಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು,ಜ.11- ಟೈಲರ್‍ವೊಬ್ಬರು ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಬೆಳಗ್ಗೆ ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಷನ್‍ನಲ್ಲಿ ನಡೆದಿದೆ.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಲಾಲ್‍ಬಾಗ್ ಕಡೆಯಿಂದ ಮೆಜೆಸ್ಟಿಕ್‍ಗೆ ಮೆಟ್ರೋ ರೈಲು ಬರುತ್ತಿತ್ತು. ಮಾರ್ಗಮಧ್ಯೆಯ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಬಳಿ ರೈಲು ನಿಲುಗಡೆಗಾಗಿ ನಿಧಾನವಾಗಿ ಚಲಿಸುತ್ತಾ ಬರುತ್ತಿದ್ದಂತೆ ಏಕಾಏಕಿ ಈತ ಓಡಿಬಂದು ಆತ್ಮಹತ್ಯೆ ಮಾಡಿಕೊಳ್ಳಲು ಹಳಿ ಮೇಲೆ ಜಿಗಿದಿದ್ದಾನೆ.

ತಕ್ಷಣ ರೈಲು ಚಾಲಕರು ಬ್ರೇಕ್ ಹಾಕಿದರಾದರೂ ಕೊಂಚ ದೂರ ಕ್ರಮಿಸಿದೆ. ಕೂಡಲೇ ಮೆಟ್ರೋ ರೈಲು ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ರೈಲನ್ನು ಹಿಂದಕ್ಕೆ ತಳ್ಳಿ ಈತನನ್ನು ರಕ್ಷಿಸಿದ್ದು, ತಲೆಗೆ ತೀವ್ರ ಪೆಟ್ಟಾಗಿದ್ದರಿಂದ 108 ಆ್ಯಂಬುಲೆನ್ಸ್‍ನಲ್ಲಿ ಕರೆದೊಯ್ದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿವಿಪುರಂ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಸಿಸಿಟಿವಿಯನ್ನು ಪರಿಶೀಲಿಸಿದಾಗ ರೈಲು ಬರುತ್ತಿರುವುದನ್ನೇ ಗಮನಿಸಿ ಈತ ಹಳಿಗೆ ಹಾರಿರುವುದು ಕಂಡುಬಂದಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ವಿಚಾರಣೆಗೊಳಪಡಿಸಿದಾಗ ತನ್ನ ಹೆಸರು ವೇಣು, ಟೈಲರ್ ವೃತ್ತಿ ಮಾಡುತ್ತಿದುದಾಗಿ ತಿಳಿಸಿದ್ದಾನೆ. ಆತ ಏಕೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಒಂದು ವೇಳೆ ಹಳಿಯ ಮೇಲೆ ಬಿದ್ದಿದ್ದರೆ ಆತನ ಪ್ರಾಣವೇ ಹೋಗುವ ಸಂಭವವಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಈ ಬಗ್ಗೆ ವಿವಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ