ನರ್ಸ್ ನಿರ್ಲಕ್ಷ್ಯ: ಹೆರಿಗೆ ಮಾಡಿಸುತ್ತಿದ್ದ ವೇಳೆ ತುಂಡಾಗಿ ಬಂದ ಹಸುಗೂಸು

ರಾಮಗಢ (ರಾಜಸ್ಥಾನ), ಜ.11- ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ತನದಿಂದ ಸಂಭವಿಸುವ ಅನಾಹುತಕ್ಕೆ ಇದು ಮತ್ತೊಂದು ನಿದರ್ಶನ.
ಮಹಿಳೆಯೊಬ್ಬರ ಹೆರಿಗೆ ಮಾಡಿಸುತ್ತಿದ್ದ ಪುರುಷ ನರ್ಸ್ ತನ್ನ ನಿರ್ಲಕ್ಷ್ಯದಿಂದ ಹಸುಗೂಸನ್ನು ಹೊರತೆಗೆಯುವ ವೇಳೆ ಎರಡು ತುಂಡಾಗಿಸಿರುವ ಆಘಾತಕಾರಿ ಘಟನೆ ರಾಜಸ್ಥಾನದ ರಾಮಗಢ ಜಿಲ್ಲೆಯಲ್ಲಿ ನಡೆದಿದೆ.

ಮಗಢ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಪುರುಷ ನರ್ಸ್ ಈ ಕೃತ್ಯ ಎಸಗಿದ್ದಾನೆ. ಘಟನೆ ನಂತರ ತಾಯಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸಿದ್ದಾಳೆ.

ಹೆರಿಗೆ ಸಮಯದಲ್ಲಿ ತಾಯಿಯ ಗರ್ಭದಿಂದ ಹಸುಗೂಸನ್ನು ಹೊರತೆಗೆಯುವಾಗ ನಿರ್ಲಕ್ಷ ತೋರಿದ ನರ್ಸ್ ಭ್ರೂಣವನ್ನು ಜೋರಾಗಿ ಎಳೆದಿದ್ದಾನೆ. ಆ ವೇಳೆ ಮಗು ಎರಡು ತುಂಡಾಗಿ ಹೊರಬಂದಿದೆ. ಇದರ ತರುವಾಯ ನರ್ಸ್ ಹಾಗೂ ಅವನ ಸಹೋದ್ಯೋಗಿಗಳು ಮಗುವಿನ ಅರ್ಧ ಭಾಗವನ್ನು ಆಸ್ಪತ್ರೆಯ ಶವಾಗಾರ ದಲ್ಲಿಟ್ಟಿದ್ದು ಹೆಚ್ಚುವರಿ ಚಿಕಿತ್ಸೆಗಾಗಿ ಗರ್ಭಿಣಿ ತಾಯಿಯನ್ನು ಜೈಸಲ್ಮೇರ್‍ಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ ಮಹಿಳೆಯ ಹೆರಿಗೆ ವೇಳೆ ಪ್ಲೆಸೆಂಟಾ (ಒಕ್ಕಳಬಳ್ಳಿ ತ್ಯಾಜ್ಯ)ವನ್ನು ಮಹಿಳೆಯ ಹೊಟ್ಟೆಯಲ್ಲೇ ಬಿಡಲಾಗಿದೆ. ಇದಾಗಿ ಡಾ.ರವೀಂದ್ರ ಸಂಖ್ಲಾ ನೇತೃತ್ವದ ತಂಡ ಮಹಿಳೆಯನ್ನು ಪರಿಶೀಲಿಸಿದಾಗ ಆಕೆಯ ಹೊಟ್ಟೆಯಲ್ಲಿ ಶಿಶುವಿನ ತಲೆ ಭಾಗವಿರುವುದು ಪತ್ತೆಯಾಗಿದೆ.ಈ ಕುರಿತಂತೆ ಅವರು ಗರ್ಭಿಣಿಯ ಸಂಬಂಧಿಗಳಿಗೆ ತಿಳಿಸಿದರು.

ಈ ಸಂಬಂಧ ಮಹಿಳೆಯ ಪತಿ ರಾಮಗಢದ ಆಸ್ಪತ್ರೆ ವಿರುದ್ಧ ದೂರು ಸಲ್ಲಿಸಿದ್ದರೂ ಪೊಲೀಸರು ಇದುವರೆಗೆ ಯಾರೊಬ್ಬರನ್ನೂ ಬಂಧಿಸಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ